Advertisement

ಕೋವಿಡ್ ನಿಯಂತ್ರಣದಲ್ಲಿ ಕಾಂಗ್ರೆಸ್‌ ಉತ್ತಮ ಕಾರ್ಯ

05:02 PM May 20, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ವಿಶ್ವಕ್ಕೆ ಅಂಟಿದ ಕಂಟಕವಾಗಿದ್ದು, ರಾಜ್ಯದಲ್ಲಿ ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಷ್ಟೇ ಉತ್ತಮ ಕಾರ್ಯವನ್ನು ರಾಜ್ಯ ಕಾಂಗ್ರೆಸ್‌ ಘಟಕವೂ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

Advertisement

ಮಂಗಳವಾರ ಇಲ್ಲಿನ ಶಾಸಕ ಭವನ ಮುಂಭಾಗದಲ್ಲಿ ಕ್ಷೇತ್ರದ 3912 ವಿಕಲಚೇತರಿಗೆ ಆಹಾರ ಕಿಟ್‌ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾರ್ಗದರ್ಶನದಲ್ಲಿ ಪಕ್ಷ ಜನತೆಗೆ ಆತ್ಮವಿಶ್ವಾಸವನ್ನು ತುಂಬಿ ನೆರವಿಗೆ ಧಾವಿಸಿದೆ ಎಂದರು.

ರಾಜ್ಯದ ಉದ್ದಗಲಕ್ಕೆ ಕಾಂಗ್ರೆಸ್‌ ಶಾಸಕರು ಹಾಗೂ ನಾಯಕರು ನಿರಂತರವಾಗಿ ಪ್ರವಾಸ ಕೈಗೊಂಡು ಜನರಲ್ಲಿ ವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದ ಬಡ ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ದೀನದಲಿತರು, ಶೋಷಣೆಗೆ ಒಳಗಾದವರು ಹಾಗೂ ಅಂಗವಿಕಲರಿಗೂ ಸಹ ನೆರವು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶಾಸಕ ಟಿ. ರಘುಮೂರ್ತಿ ಕಳೆದ 60 ದಿನಗಳಿಂದ ಕೊರೊನಾ ನಿಯಂತ್ರಣದ ಜೊತೆಗೆ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಶ್ಲಾಘಿ ಸಿದರು.

ಮಾಜಿ ಸಚಿವ ಡಿ. ಸುಧಾಕರ್‌ ಮಾತನಾಡಿ, ಹಿರಿಯೂರು ಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷದ ವತಿಯಿಂದ ಬಡವರಿಗೆ ಹಲವಾರು ಸೌಲಭ್ಯವನ್ನು ವಿತರಣೆ ಮಾಡಲಾಗಿದೆ. 2019ರ ಏಪ್ರಿಲ್‌ ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ಲೋಕಸಭೆಯಲ್ಲಿ ಕೊರೊನಾ ವೈರಾಣು ಅಪಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸರ್ಕಾರ ನಿರ್ಲಕ್ಷಿಸಿದ್ದರಿಂದ ದೇಶದಲ್ಲಿ ಲಕ್ಷಾಂತರ ಜನರು ಕೊರೊನಾ ವೈರಾಣು ಪೀಡಿತರಾಗಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಪರಿಹಾರ ನೀಡುವ ಬಗ್ಗೆ ಪ್ರಚಾರ ಪಡೆಯುತ್ತಿದೆ. ಆದರೆ ವಾಸ್ತವವಾಗಿ ಈ ಹಣ ಜನರಿಗೆ ತಲುಪುತ್ತದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ ಎಂದರು. ಚಳ್ಳಕೆರೆ ಕ್ಷೇತ್ರಕ್ಕೆ ವಿವಿ ಸಾಗರದ ನೀರು ಹರಿಸುವ ವಿಚಾರದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಮಠಾಧಿಧೀಶರು, ರೈತಸಂಘದ ಪ್ರಮುಖರು, ಸಂಘ ಸಂಸ್ಥೆಗಳು, ಪಕ್ಷದ ಮುಖಂಡರು ಕಾರ್ಯನಿರ್ವಹಿಸಿದ್ದಾರೆ. ನೀರು ತರುವ ವಿಚಾರದಲ್ಲಿ ಅನೇಕ ಜನಪರ  ಹೋರಾಟಗಳು ನಡೆದಿವೆ.

Advertisement

ಕಾಂಗ್ರೆಸ್‌ ಪಕ್ಷದ ಅಧಿಕಾರದ  ಅವಧಿಯಲ್ಲೂ ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಆದರೆ ಇತ್ತೀಚೆಗೆ ಕೆಲವು ಡೋಂಗಿ ರಾಜಕಾರಣಿಗಳು ನಾವೇ ನೀರು ತಂದಿದ್ದೇವೆಂದು ಸುಳ್ಳು ಪ್ರಚಾರ ಪಡೆಯುತ್ತಿರುವುದು ವಿಷಾದನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಟಿ.ರಘುಮೂರ್ತಿ ಮಾತನಾಡಿ, ಈ ಕ್ಷೇತ್ರದ ಶಾಸಕನಾಗಿ ಮತದಾರರ ಋಣವನ್ನು ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಕ್ಷೇತ್ರದ 3912 ವಿಕಲಚೇತರಿಗೆ ಆಹಾರ ಕಿಟ್‌ ನೀಡಲಾಗುತ್ತದೆ. ಪ್ರಾರಂಭದ ಹಂತದಲ್ಲಿ ನಗರದ 472 ವಿಕಲಚೇತನರಿಗೆ ನೀಡಿ ನಂತರ ಹೋಬಳಿ ಮಟ್ಟದಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಜಿಪಂ ಸದಸ್ಯರಾದ ಪ್ರಕಾಶ್‌ಮೂರ್ತಿ, ಡಾ| ಬಿ. ಯೋಗೇಶ್‌ಬಾಬು, ಮಾಜಿ ಸದಸ್ಯ ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತಾಜ್‌ಪೀರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next