Advertisement

ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ

06:38 PM May 13, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ನಿಯಂತ್ರಣಕ್ಕೆ ಸರ್ಕಾರದ ಸೂಚನೆ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ ಎಂದು ಕೋವಿಡ್ ನಿಯಂತ್ರಣ ಟಾಸ್ಕ್ಪೋರ್ಸ್‌ ಸಮಿತಿ ಅಧ್ಯಕ್ಷ, ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ನಡೆಸಿ ಮಾತನಾಡಿದ ಅವರು,ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹಕಾರ ನೀಡಬೇಕು. ಆರೋಗ್ಯ ಇಲಾಖೆಯ ಪರಿಣಾಮಕಾರಿ ಜಾಗೃತಿ ಕಾರ್ಯದ ಮಧ್ಯೆಯೂ ಕೋವಿಡ್ ವೈರಾಣುವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಜಾಗ್ರತೆ ವಹಿಸಲು ನಗರದ ಎಲ್ಲಾ ಖಾಸಗಿ ನರ್ಸಿಂಗ್‌ ಹೋಂಗಳು ಹಾಗೂ ಖಾಸಗಿ ವೈದ್ಯರು ಸಹಕಾರ ನೀಡಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ಮಾತನಾಡಿ, ಸರ್ಕಾರ ಖಾಸಗಿ ವೈದ್ಯರ ಸಹಕಾರ ಪಡೆಯುವಂತೆ ಸೂಚನೆ ನೀಡಿದೆ. ತಾಲೂಕು ಆಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಖಾಸಗಿ ವೈದ್ಯರೂ ಕೈಜೋಡಿಸಿದಲ್ಲಿ ಚಳ್ಳಕೆರೆ ತಾಲೂಕನ್ನು ಕೊರೊನಾ ಮುಕ್ತ ತಾಲೂಕನ್ನಾಗಿ ಮಾಡಬಹುದು ಎಂದರು. ಹಿರಿಯ ಮಕ್ಕಳ ತಜ್ಞ ಡಾ| ಬಿ. ಚಂದ್ರ ನಾಯ್ಕ, ಹೃದಯ ರೋಗ ತಜ್ಞ ಡಾ| ಓಬಣ್ಣ ಪೂಜಾರ್‌, ಡಾ| ಕೆ.ಎಂ. ಜಯಕುಮಾರ್‌, ಡಾ| ಬಿ. ಲೋಕೇಶ್‌ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಪೀಡಿತರಿಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲಾಗುತ್ತಿಲ್ಲ. ಕೊರೊನಾ ಪಾಸಿಟಿವ್‌ ಕಂಡು ಬಂದರೆ ಖಾಸಗಿ ಆಸ್ಪತ್ರೆಗಳ ಸ್ಥಿತಿ ಚಿಂತಾಜನಕವಾಗುತ್ತದೆ. ಆದ್ದರಿಂದ ಸರ್ಕಾರದ ನಿಬಂಧನೆಗೊಳಪಟ್ಟು ಸಹಕಾರ ನೀಡುವುದಾಗಿ ತಿಳಿಸಿದರು. ಬಿಇಒ ಸಿ.ಎಸ್‌. ವೆಂಕಟೇಶಪ್ಪ, ವೃತ್ತ ನಿರೀಕ್ಷಕ ಈ. ಆನಂದ, ಶಿರಸ್ತೇದಾರ್‌ ಮಂಜುನಾಥಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next