Advertisement

ಚಲೇ ಜಾವ್‌ ಆಂದೋಲನ: ಸ್ವತಂತ್ರ ಭಾರತಕ್ಕೆ ಮುನ್ನುಡಿ

11:32 PM Aug 07, 2021 | Team Udayavani |

ನಮ್ಮ ಪೂರ್ವಿಕರ ಅಸೀಮ ತ್ಯಾಗ, ಉತ್ಕೃಷ್ಟ ಬಲಿದಾನದ ಭಿಕ್ಷೆಯೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಹೆಜ್ಜೆಹೆಜ್ಜೆಗೂ ಎದುರಾದ ವಿಪ್ಲವಗಳನ್ನು ಸಮರ್ಥವಾಗಿ ಎದುರಿಸಿ ವಿಜಯದ ಹೂನಗೆ ಬೀರಿದ ಸಾಹಸಿಗಳ ವೀರಗಾಥೆಯ ಫ‌ಲಶ್ರುತಿಯೇ ನಮ್ಮ ನಿತ್ಯಸಂಭ್ರಮದ ಬದುಕು. ಎಂಟು ದಶಕಗಳ ಹಿಂದೆ ಸಹಸ್ರ ವರ್ಷಗಳ ಪೈಶಾಚಿಕ ರಾಕ್ಷಸೀ ಕೃತ್ಯಗಳಿಗೆ, ದುರುಳರ ಅಟ್ಟಹಾಸಕ್ಕೆ, ಆಕ್ರಮಣಶೀಲತೆಯ ಶವಪೆಟ್ಟಿಗೆಗೆ ಹೊಡೆಯಲು ಕೊನೆಯ ಎರಡು ಮೊಳೆಗಳಷ್ಟೇ ಬಾಕಿ ಉಳಿದಿತ್ತು. ಅದರಲ್ಲೊಂದು 1942ರ ಆಗಸ್ಟ್‌ 8ರಂದು ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ “ಚಲೇ ಜಾವ್‌’ ಚಳವಳಿಯಾದರೆ, ನೇತಾಜಿ ಸುಭಾಶ್ಚಂದ್ರ ಬೋಸರ ಸಮರ್ಥ ನಾಯಕತ್ವದಲ್ಲಿ ಮೂಡಿಬಂದ “ಚಲೋ ದಿಲ್ಲಿ’ ಎರಡನೆಯದು.

Advertisement

ಬ್ರಿಟಿಷರೊಂದಿಗಿನ ಸಂಧಾನ, ಮಾತುಕತೆ ವಿಫ‌ಲವಾದಾಗ ಗಾಂಧೀಜಿ, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿದರು. ಅಷ್ಟಕ್ಕೂ “ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಘೋಷಣೆ ಆಗಸ್ಟ್‌ ಕ್ರಾಂತಿಯಿಂದಲೇ ಹೊರಹೊಮ್ಮಿದ್ದಲ್ಲ. 1857ರ ಸ್ವಾತಂತ್ರ್ಯ ಸಮರಾಂಗಣದಿಂದಲೇ ಆ ವೀರಘೋಷ ಮೂಡಿತ್ತು. ಮಡುಗಟ್ಟಿದ್ದ ಆಕ್ರೋಶ, ಕಟ್ಟಿದ್ದ ಕಣ್ಣೀರಕೋಡಿ ಒಮ್ಮಿಂದೊಮ್ಮೆಗೆ ಸ್ಫೋಟಿಸಿ ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧವಾದದ್ದು ಕ್ವಿಟ್‌ ಇಂಡಿಯಾದ ಕಾವಿನಿಂದಲೇ. ಸ್ವಾತಂತ್ರ್ಯಆಂದೋಲನದ ಹೆಜ್ಜೆಹೆಜ್ಜೆಗೂ ಶಾಂತಿಯ ಪ್ರತಿಪಾದಕರಾಗಿಯೇ ಛಾಪು ಮೂಡಿಸಿದ್ದ ಗಾಂಧೀಜಿ ಮೊದಲ ಬಾರಿಗೆ, “ಮಾಡು ಇಲ್ಲವೇ ಮಡಿ’ ಎನ್ನುವುದು ನಮ್ಮ ಬದುಕಿನ ಮಂತ್ರ. ನಾವು ಹೋರಾಟಕ್ಕೆ ಧುಮುಕಿರುವುದೇ ಭಾರತದ ಪೂರ್ಣ ಸ್ವಾತಂತ್ಯಕ್ಕಾಗಿ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ದುಡಿಯುತ್ತೇವೆ ಅಥವಾ ಮಡಿಯುತ್ತೇವೆ. ಆದರೆ ಇನ್ನೆಂದೂ ಭಾರತೀಯರು ಗುಲಾಮಗಿರಿಯಲ್ಲಿ ಬದುಕುವ ಚಿತ್ರಣವನ್ನು ನಿಜಗೊಳಿಸಲು ಬಿಡುವುದಿಲ್ಲ’ ಎಂದು ಘೋಷಿಸಿದ್ದು ಸ್ವಾತಂತ್ರ್ಯಾಪೇಕ್ಷೆಯ ಕಾವನ್ನು ನೂರುಪಟ್ಟು ಹೆಚ್ಚಿಸಿತು.

ಭಾರತವನ್ನು ದ್ವಿತೀಯ ಮಹಾಯುದ್ಧದ ಭಾಗವಾಗಿ ಮಾಡುವ ಕುಟಿಲ ನೀತಿಯ ದುರುದ್ದೇಶದಿಂದಲೇ 1942ರ ಮಾರ್ಚ್‌ನಲ್ಲಿ ಕಾಲಿಟ್ಟಿದ್ದ ಕ್ರಿಪ್ಸ್‌ ಜತೆಗಿನ ಮಾತುಕತೆ ಮೊದಲ ಹಂತದಲ್ಲೇ ಮುರಿದುಬಿತ್ತು. 1942ರ ಆಗಸ್ಟ್‌ 8ರಂದು ಮುಂಬೈಯಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ದೇಶಭಕ್ತರನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿ ಅವರು ಸ್ವಾತಂತ್ರ್ಯ ಪ್ರಾಪ್ತಿಯ ನಿರ್ಣಾಯಕ ಘಟ್ಟವಾಗಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣೆಗೆ ಚಾಲನೆ ನೀಡಿದರು. ಹೋರಾಟದ ಸುಳಿವಿದ್ದ ಬ್ರಿಟಿಷ್‌ ಸರಕಾರ ಎಲ್ಲ ಹಂತಗಳಲ್ಲಿಯೂ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಒಂದೇ ದಿನದಲ್ಲಿ 12,000ಕ್ಕೂ ಮಿಕ್ಕಿದ ಹೋರಾಟಗಾರರನ್ನು ಬಂಧಿಸಲಾಯಿತು. ದೇಶಾದ್ಯಂತ ನಡೆದ ಸಂಘಟಿತ ಹೋರಾಟ ಬ್ರಿಟಿಷರ ನಿದ್ದೆಗೆಡಿಸಿತು. ಮಹಾಯುದ್ಧ ಗೆದ್ದರೂ ಭಾರತವನ್ನು ಗೆಲ್ಲುವುದು ಅಸಾಧ್ಯವೆಂಬ ಸತ್ಯದ ಅರಿವಾಗಲು ಇಂಗ್ಲಿಷರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಭಾರತೀಯರ ಸಾಹಸಕ್ಕೆ ಉತ್ತರವಾಗಿ ಹಿಂಸಾಮಾರ್ಗವನ್ನೆತ್ತಿಕೊಂಡ ಕೆಂಪಂಗಿ ಪಡೆ ಸಾವಿರಾರು ನಾಗರಿಕರನ್ನು ಗುಂಡಿನ ದಾಳಿ, ಗಲ್ಲು ಶಿಕ್ಷೆಯ ಮೂಲಕ ಸಾಯಿಸಿತು. ಒಂದು ಹಂತದಲ್ಲಿ ಗಾಂಧೀಜಿಯವರನ್ನೂ ಒಳಗೊಂಡಂತೆ ಕಾಂಗ್ರೆಸ್‌ ನಾಯಕರನ್ನು ಗಡೀಪಾರು ಮಾಡುವ ಅಥವಾ ವಿದೇಶೀ ಜೈಲುಗಳಲ್ಲಿರಿಸಲು ಬ್ರಿಟಿಷರು ಮುಂದಾದರಾ ದರೂ ಜನರು ಇನ್ನಷ್ಟು ದಂಗೆ ಎದ್ದಾರೆಂಬ ಭೀತಿಗೊಳಗಾಗಿ ಆ ವಿಚಾರಕ್ಕೆ ತಿಲಾಂಜಲಿ ಬಿಟ್ಟಿತು. ದೇಶಾದ್ಯಂತ ವ್ಯಾಪಿಸಿದ್ದ ಹೋರಾಟದ ಜ್ವಾಲೆಯು ಎರಡೇ ವರ್ಷಗಳಲ್ಲಿ ತಣ್ಣಗಾಯಿತು. ಆದರೆ ಆ ನಡುವೆ ಭಾರತೀಯ ಜನಮಾನಸದಲ್ಲಿ ಸ್ವತಂತ್ರ ದೇಶದ ಬೀಜಬಿತ್ತನೆಯಾಗಿತ್ತು. ಶಾಂತಿಮಂತ್ರದ ಹಾದಿಗಿಂತಲೂ ಕ್ರಾಂತಿ ಪಂಜಿನ ಕಿಡಿಗೆ ಸೂರ್ಯ ಮುಳುಗದ ಸಾಮ್ರಾಜ್ಯ ನಡುಗುತ್ತದೆಯೆಂಬ ಸತ್ಯವನ್ನು ಆಗಸ್ಟ್‌ ಕ್ರಾಂತಿಯು ಸಾಮಾನ್ಯ ಭಾರತೀಯನಿಗೂ ತಿಳಿಹೇಳಿತು. “ಚಲೇ ಜಾವ್‌’ ಚಳವಳಿಯ ಕಾವು ಆರುವ ಹೊತ್ತಿಗೆ ನೇತಾಜಿ ನಾಯಕತ್ವದಲ್ಲಿ ಅವಿಭಜಿತ ಭಾರತದ ಸ್ವತಂತ್ರ ಸರಕಾರವು ರೂಪು ಗೊಂಡದ್ದು ಭಾರತೀಯರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಗಾಂಧೀಜಿ ಜೈಲುವಾಸದ ನಡುವೆ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆೆ ಎದುರಾದಾಗ ಸುಭಾಶ್ಚಂದ್ರ ಬೋಸರ “ಆಜಾದ್‌ ಹಿಂದ್‌ ಫೌಜ್‌’ ಯುವ ದೇಶಭಕ್ತರ ಒರತೆಯಾಯಿತು. ಸ್ವತಂತ್ರ ಭಾರತಕ್ಕದು ಮುನ್ನುಡಿಯನ್ನೂ ಬರೆಯಿತು. “ನಮಗೂ ಶಕ್ತಿಯಿದೆ, ಶಕ್ತಿಯಿಂದ ನಾವು ಜಗತ್ತನ್ನೂ ಗೆಲ್ಲಬಲ್ಲೆವು’ ಎಂಬ ಸಿಂಹಶಕ್ತಿಯನ್ನು ಸಮಗ್ರ ಭಾರತಕ್ಕೆ ನೀಡಿದ ಆಗಸ್ಟ್‌ ಕ್ರಾಂತಿ, ಸ್ವಾತಂತ್ರ್ಯಹೋರಾಟದಲ್ಲೊಂದು ಹೊಸ ಅಧ್ಯಾಯ ಬರೆದ ತ್ರಿಕಾಲ ಪ್ರೇರಣಾಸ್ರೋತ. ಕ್ವಿಟ್‌ ಇಂಡಿಯಾ ಆಂದೋಲನದ ಎಂಬತ್ತನೇ ವರ್ಷಾಚರಣೆಯ ಸಂಧಿಕಾಲ ನವಭಾರತ ನಿರ್ಮಿತಿಗೆ ಹೊಸ ಬೆಳಕೀಯಲಿ.

 

Advertisement

-ಆದರ್ಶ ಗೋಖಲೆ

Advertisement

Udayavani is now on Telegram. Click here to join our channel and stay updated with the latest news.

Next