Advertisement

ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದೆ : ಛಲವಾದಿ ನಾರಾಯಣಸ್ವಾಮಿ

03:02 PM Aug 21, 2021 | Team Udayavani |

ಬೆಂಗಳೂರು: ದಲಿತ ಪರ ಕಾಳಜಿ, ದಲಿತೋದ್ಧಾರ, ಸಾಮಾಜಿಕ ನ್ಯಾಯ ಎಂದು ಬರಿ ಬಾಯಿ ಮಾತಿನ ಮೂಲಕ ತುಟಿಗೆ ತುಪ್ಪ ಸವರುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ದಲಿತೋದ್ಧಾರ ಎಂಬುದು ಗಂಟಲಿಂದ ಹೊರಗೆ ಅಷ್ಟೇ. ಅವರ ಹೃದಯದಲ್ಲಿ ಎಂದೂ ಸಹ ನೈಜವಾಗಿ ಬೆಳೆದಿಲ್ಲ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆಗಿರುವ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಅವರು ಪಕ್ಷದಲ್ಲಿ ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿದ್ದಾರೆ. ‘ಅಳಿಯನ ಕುರುಡು ಬೆಳಗಾದರೆ ಗೊತ್ತಾಗುತ್ತೆ’ ಎಂಬ ಗಾದೆಮಾತು ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಸೇರಿದಂತೆ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕತ್ತಿ ಗುರಾಣಿ ಹಿಡಿದು ಮುಂದೆ ಬರುವ ಕಾಂಗ್ರೆಸ್ ನಾಯಕರಿಗೆ ಚುನಾವಣೆಗಳು ಬಂದಾಗಲೇ ಅವರ ಬಣ್ಣಗಳು ಬಯಲಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಲೇ ಇದ್ದರೆ ನಾವೂ ರಾಷ್ಟ್ರಮಟ್ಟದ ನಾಯಕರಾಗಿ ಮಿಂಚುತ್ತೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಇಡೀ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮಿಂಚು ಹುಳವಾಗಿ ಕಾಣಿಸಿಕೊಂಡು ಮಾಯವಾಗಿದೆ. ಭಾರತದ ಇತಿಹಾಸದಲ್ಲೇ ದೊಡ್ಡ ಪಕ್ಷ ಕಾಂಗ್ರೆಸ್‍ನಲ್ಲಿ ನಾಯಕರಿಲ್ಲದೇ ಕುಟುಂಬ ರಾಜಕಾರಣ ಕೇಂದ್ರೀಕೃತವಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ʼಹಾಳೂರಿಗೆ ಉಳಿದವನೇ ಗೌಡʼನ ದಬ್ಬಾಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ :ಜೈಲಿನಿಂದ ಬರುತ್ತಿದ್ದಂತೆ ಗತ್ತಿನಿಂದ ಮೀಸೆ ತಿರುವಿದ ವಿನಯ್ ಕುಲಕರ್ಣಿ

ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದ್ದಕ್ಕೆ ಇಡೀ ದೇಶದಲ್ಲೇ ಅದು ತಿರಸ್ಕಾರಕ್ಕೆ ಒಳಗಾಗಿರುವ ಪಕ್ಷವಾಗಿದೆ. ದೊಡ್ಡ ದೊಡ್ಡ ನಾಯಕರೇ ತಿಹಾರ್ ಜೈಲಿನಲ್ಲಿ ವಾಸವಾಗಿ ಹೊರ ಬಂದಿದ್ದಾರೆ. ಅವರೇನು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ? ಅಧಿಕಾರ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ನೀರಿನಿಂದ ಹೊರ ತೆಗೆದ ಮೀನಿನಂತೆ ಆಗಿದ್ದಾರೆ. ಅಲ್ಲಿನ ಕಾಂಗ್ರೆಸ್ ಮುಖಂಡರು. ಹೇಗಾದರೂ ಸರಿ ಅಧಿಕಾರ ಹಿಡಿದು ದೇಶದಲ್ಲಿ ಭ್ರಷ್ಟಾಚಾರದ ಹೆಮ್ಮರವನ್ನಾಗಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಚಾಮರಾಜನಗರದಲ್ಲಿ ಸೋತು ಸುಣ್ಣವಾಗಿರುವ ಮಾಜಿ ಸಂಸದ ಧ್ರುವನಾರಾಯಣ್ ಸ್ವಾರ್ಥ ರಾಜಕಾರಣಿ. ಎಂದೂ ಸಹ ದಲಿತ ಪರವಾದ ನಿಲುವನ್ನು ಹೊಂದದ ವ್ಯಕ್ತಿ. ಅವರು ಸಮುದಾಯದ, ಜಾತಿಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು? ಅವರೊಬ್ಬ ಬಿಳಿ ಆನೆಯ ರೀತಿ. ಸೋತ ಅವರನ್ನು ಅವರ ಪಕ್ಷದಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ ಮೇಲೆ ‘ಕಾಡಿಗೆಗಣ್ಣಿನ ಚಲುವೆ ಮನೆಗೆ ಕೇಡು ತಂದಳು ಎಂಬಂತಾಗಿದೆʼ. ಎಂದು ತಿಳಿಸಿದ್ದಾರೆ.

ಅವರು ಸಂಸದರಾಗಿದ್ದಾಗ ತಳ ಸಮುದಾಯದ, ದಲಿತರ ಅಭಿವೃದ್ಧಿಗೆ ಎಂದೂ ಸಹ ಸಂಸತ್ತಿನ ಅಧಿವೇಶನದಲ್ಲಿ ತುಟಿ ಬಿಚ್ಚಲಿಲ್ಲ. ಸೋತ ನಂತರ ತನ್ನ ಉಳಿವಿಗಾಗಿ ಗುಂಗಾಡಿ ಹುಳುವಿನಂತೆ ಸದ್ದು ಮಾಡಿ ಮಾಧ್ಯಗಳ ಮುಂದೆ ಅಬ್ಬರಿಸುತ್ತಿದ್ದಾರೆ ಎಂದಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆಯಿಂದ ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಅದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತೆ ನಾವು ಮೂಲೆ ಸೇರುವುದು ನಿಶ್ಚಿತ ಎಂದು ಈಗಿನಿಂದಲೇ ಸುಳ್ಳುಗಳನ್ನು ಬಿತ್ತುತ್ತ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜನರೇನು ದಡ್ಡರಲ್ಲ. ಸಾಮಾಜಿಕ, ರಾಜಕೀಯ ಪ್ರಜ್ಞೆ ಅವರಲ್ಲಿ ಆಳವಾಗಿ ಬೆಳೆದು ಹೆಮ್ಮರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next