Advertisement

ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!

12:10 AM Mar 04, 2021 | Team Udayavani |

ಕಾರ್ಕಳ : ತುಳುನಾಡಿನಲ್ಲಿ ಈಗ ಕಂಬಳದ ಅಬ್ಬರ. ಕೃಷಿ ಪರಂಪರೆಯ ಕಂಬಳದಲ್ಲಿ ಹೊಸ ದಾಖಲೆ, ಪ್ರಯೋಗ ನಡೆದೇ ಇದೆ. ಇತ್ತೀಚೆಗಷ್ಟೇ ಬಜಗೋಳಿಯ ಬಾಲಕ ಕೋಣಗಳ ಜತೆ ಓಡಿ ಸಂಚಲನ ಮೂಡಿಸಿದ್ದು, ಈಗ ಬಾಲಕಿಯೋರ್ವಳು ಕಂಬಳ ಕರೆಗೆ ಇಳಿಯುವ ಮೂಲಕ ಕಂಬಳದಲ್ಲಿ ಹೊಸ ಭರವಸೆ ಸೃಷ್ಟಿಸುವ ಆಶಾವಾದ ಮೂಡಿಸಿದ್ದಾಳೆ.

Advertisement

ಕೆಲ ದಿನಗಳ ಹಿಂದೆ ಮಿಯ್ನಾರುವಿನ ಲವಕುಶ ಜೋಡುಕರೆ ಕಂಬಳದಲ್ಲಿ ಪರಮೇಶ್ವರ ಭಟ್‌ ಅವರ ಪುತ್ರಿ ಚೈತ್ರಾ ಮೊತ್ತಮೊದಲ ಬಾರಿಗೆ ಕಂಬಳ ಕರೆಗೆ ಇಳಿದಿದ್ದಾಳೆ. ಈ ಮೂಲಕ ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ. ಬೋಳಂಬಳ್ಳಿಯ ಕುವರಿ ಕುಂದಾಪುರ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್‌ -ರಮ್ಯಾ ದಂಪತಿಯ
ಇಬ್ಬರು ಮಕ್ಕಳಲ್ಲಿ ಚೈತ್ರಾ ಹಿರಿಯವಳು.

ವಯಸ್ಸು 11. ಕಾಲ್ತೊಡು ಸರಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆ ಮಿಯ್ನಾರು ಕಂಬಳದಲ್ಲಿ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ, ಕಂಬಳ ಕರೆಗೆ ಇಳಿದಿದ್ದಳು. ಈಕೆಯ ಸಹೋದರ ರಾಮ್‌ ಭಟ್‌ ಕೂಡ ಕಂಬಳಪ್ರೇಮಿ.
ಬಾಲ್ಯದಿಂದಲೇ ಆಸಕ್ತಿ ಚೈತ್ರಾಗೆ ಕಂಬಳ ಕೋಣಗಳೆಂದರೆ ತುಂಬಾ ಪ್ರೀತಿ. ಚಿಕ್ಕ ವಯಸ್ಸಿನಲ್ಲೇ ಕಂಬಳ ಕೋಣಗಳಿಗೆ ಸ್ನಾನಮಾಡಿಸುತ್ತ, ಹುರುಳಿ ಬೇಯಿಸಿ ತಿನ್ನಿಸುತ್ತ, ತಂದೆ- ತಾಯಿಗೆ ಸಹಾಯ ಮಾಡುತ್ತ ಬೆಳೆದವಳು. ಕೋಣಗಳ ಮೇಲಿನ ಈಕೆಯ ಪ್ರೀತಿ ಕಂಬಳದ ಕರೆಗೆ ಇಳಿಯುವ ಮೂಲಕ ಮುಂದುವರಿದಿದೆ. ಕೃಷಿಕ ಪರಮೇಶ್ವರ್‌ ಭಟ್‌ 25 ವರ್ಷಗಳಿಂದ ಕೋಣಗಳನ್ನು ಸಾಕುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ದ.ಕ., ಉಡುಪಿ ಜಿಲ್ಲೆಯ ಕಂಬಳಗಳಲ್ಲಿ ಭಾಗವಹಿಸುತ್ತಿದ್ದಾರೆ. ಆಗೆಲ್ಲ ಚೈತ್ರಾಳಿಗೆ ಅವಕಾಶ ಸಿಕ್ಕಿರಲಿಲ್ಲ. ಮಿಯ್ನಾರುವಿನಲ್ಲಿ ನಡೆದ ಕಂಬಳದಲ್ಲಿ ಈಕೆಗೆ ಅವಕಾಶ ದೊರೆತಿದೆ.

ಶ್ರೀನಿವಾಸ ಅವರೇ ಮಾಡೆಲ್‌!
ಮನೆಯಲ್ಲಿ ಕಂಬಳದ 110 ಮೀಟರ್‌ ಉದ್ದದ ಕರೆಯಿದ್ದು ಪ್ರತಿ ವಾರ ಕಂಬಳ ಕೋಣಗಳನ್ನು ಓಡಿಸುತ್ತಾ ಚೈತ್ರಾ ಅಭ್ಯಾಸ ನಡೆಸುತ್ತಿದ್ದಾಳೆ . ತಾನು ಕೂಡ ಕಂಬಳ ಓಟಗಾರ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಂತೆ ಕಂಬಳ ಓಟದಲ್ಲಿ ಮಿಂಚಬೇಕು ಎನ್ನುವ ಆಸೆ ತನ್ನದು ಎಂದು ಆಕೆ ಹೇಳುತ್ತಾಳೆ.

Advertisement

ತರಬೇತಿಗೆ ಬದ್ಧ
ಚೈತ್ರಾ ಕರೆಗೆ ಇಳಿದಿರುವುದು ಕಂಬಳ ಇತಿಹಾಸದಲ್ಲೇ ಹೊಸದೊಂದು ಅಧ್ಯಾಯ. ಇದು ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲು ಅವಕಾಶ ಸಿಕ್ಕಂತಾಗಿದೆ. ಈ ಕ್ರೀಡೆಯಲ್ಲಿ ಮಹಿಳಾ ಓಟಗಾರರಿಗೂ ಪ್ರಾಶಸ್ತ್ಯ ನೀಡಲು ಕಂಬಳ ಅಕಾಡೆಮಿಯ ಮೂಲಕ ಸೂಕ್ತ ತರಬೇತಿ ನೀಡಲು ನಾವು ಬದ್ಧರಾಗಿದ್ದೇವೆ.
– ಗುಣಪಾಲ ಕಡಂಬ , ಕಂಬಳ ಅಕಾಡೆಮಿ ಸಂಚಾಲಕರು

ಪ್ರೋತ್ಸಾಹದ ನಿರೀಕ್ಷೆ
ಕಂಬಳದ ಸಮಯದಲ್ಲಿ ಕೋಣಗಳ ಶೃಂಗಾರದಲ್ಲಿ ಆಕೆಯೇ ಮುಖ್ಯ ಪಾತ್ರವಹಿಸುತ್ತಾಳೆ. ಮನೆಯ ಕಂಬಳ ಕರೆಯಲ್ಲಿ ಆಕೆಯೇ ಕೋಣಗಳನ್ನು ತೆಗೆದುಕೊಂಡು ಓಡಿಸುತ್ತಾಳೆ. ಪ್ರೋತ್ಸಾಹ ಸಿಕ್ಕಿದರೆ ಜೂನಿಯರ್‌ ವಿಭಾಗದಲ್ಲಿ ಆಕೆಯನ್ನು ಭಾಗವಹಿಸುವಂತೆ
ಮಾಡಬೇಕೆನ್ನುವುದು ನನ್ನ ಆಶಯ.
– ಪರಮೇಶ್ವರ್‌ ಭಟ್‌ ಬೋಳಂಬಳ್ಳಿ, ತಂದೆ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next