ಹಾವೇರಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಶೋಷಿತರ ಸಮಗ್ರ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅಲ್ಲದೇ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿರಂತರ ಶ್ರಮಿಸಿದ ಧೀಮಂತ ನಾಯಕ ಎಂದು ಶಾಸಕ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಹೇಳಿದರು.
ನಗರದ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪರಿವರ್ತನೆಯ ಮಾರ್ಗದಲ್ಲಿ ಅಸಮಾನತೆಯನ್ನು ತೊಡೆದು ವ್ಯಕ್ತಿಯ ಸ್ವಾತಂತ್ರÂಕ್ಕೆ ಬೆಲೆ ನೀಡಿದ ಅರಸು ಅವರು, ಜೀತ ವಿಮುಕ್ತಿ ಜಾರಿಗೆ ತಂದರು. ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಉಳುವವನೇ ಹೊಲದೊಡೆಯ, ವಿದ್ಯಾರ್ಥಿನಿಲಯ, ವೃದ್ಧಾಪ್ಯವೇತನ, ಸ್ಟೈಫಂಡ್, ಭಾಗ್ಯಜ್ಯೋತಿ ಹೀಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಅರಸು ಅವರು ಹಿಂದುಳಿದ ವರ್ಗಗಳ ಜನರು ಹೊಸ ಬದುಕು ಪಡೆದು ಹೊಸ ಚೈತನ್ಯದಿಂದ ಬದುಕಲು ರೂವಾರಿಗಳಾದರು ಎಂದು ಹೇಳಿದರು.
ಸನ್ಮಾನ: ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾದ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದ ಚಂದ್ರಶೇಖರ ಅವರಿಗೆ 50 ಸಾವಿರ ರೂ. ಚೆಕ್, ಪ್ರಮಾಣಪತ್ರ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಮಟ್ಟದ ಡಿ.ದೇವರಾಜ್ ಅರಸ್ ಪ್ರಶಸ್ತಿ ಸ್ವೀಕರಿಸಿದ ಜಿ.ಟಿ.ಚಂದ್ರಶೇಖರ ಅವರು ಮಾತನಾಡಿ, ಬಸವಣ್ಣನವರು ಸಮಾನತೆ ಸಾರಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ತಂದರು. ಡಿ.ದೇವರಾಜ ಅರಸು ಅವರು ಎಲ್ಲವನ್ನೂ ಜಾರಿಗೆ ತಂದರು. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ಸಮುದಾಯ ಡಿ.ದೇವರಾಜ ಅರಸು ಅವರನ್ನು ಸ್ಮರಿಸುವಂತಾಗಿದೆ ಎಂದರು.
ಡಿ.ದೇವರಾಜ ಅರಸು ಅವರ ಜೀವನ ಮತ್ತು ಚಿಂತನೆ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪ್ರಮೋದ ನಲವಾಗಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿವಿಧ ಹಿಂದುಳಿದ ವರ್ಗಗಳ ವಸತಿ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೀದಿ ನಾಟಕ ಕಲಾವಿದರಿಂದ ಡಿ.ದೇವರಾಜ ಅರಸು ಜೀವನ ಕುರಿತು ರೂಪಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಶೋಕ ಗದ್ದಿಗೌಡರ, ಮಹೇಂದ್ರ ಪಡಿಕರ, ಚಂದ್ರಪ್ಪ ಚಕ್ರಸಾಲಿ, ಬಸವರಾಜ, ಮಂಜುನಾಥ, ರಮೇಶ ಆನವಟ್ಟಿ, ಎಂ.ಎಸ್.ಕೋರಿಶೆಟ್ಟರ ಇತರರು ಇದ್ದರು.
ಇಂದಿನ ಯುವ ಪೀಳಿಗೆ ಡಿ.ದೇವರಾಜ ಅರಸು ಅವರ ಹೆಸರು ಉಳಿಸುವ ಕೆಲಸ ಮಾಡಬೇಕು. ಅವರ ಕಾರ್ಯಗಳನ್ನು ಸ್ಮರಿಸಬೇಕು ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
-ನೆಹರು ಓಲೇಕಾರ, ಶಾಸಕರು