Advertisement

ಜನಪರ ಚರ್ಚೆಗೆ ಹೆಚ್ಚು ಆದ್ಯತೆ ನೀಡುವುದೇ ಗುರಿ; ಪ್ರತಾಪಚಂದ್ರ ಶೆಟ್ಟಿ

06:00 AM Dec 13, 2018 | |

ಸುವರ್ಣಸೌಧ: ರಾಜಕಾರಣಕ್ಕಿಂತ ಜನರ ಭಾವನೆಗೆ ಸ್ಪಂದಿಸುವುದು ಮುಖ್ಯ. ಅದರಂತೆ ಸಮಸ್ಯೆ, ಆರೋಪಗಳಿಗಿಂತ ಸುಧಾರಣೆ, ಪರಿಹಾರ ಕ್ರಮಗಳ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ಕಲ್ಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಒತ್ತು ನೀಡಲಾಗುವುದು. ಜತೆಗೆ ಸದನವನ್ನು ಕಾಗದರಹಿತವಾಗಿ ನಡೆಸಲು ಇ- ವಿಧಾನ ವ್ಯವಸ್ಥೆಯನ್ನು ನನ್ನ ಅವಧಿಯಲ್ಲಿ ಜಾರಿಗೊಳಿಸಲಾಗುವುದು.

Advertisement

ಇದು ವಿಧಾನ ಪರಿಷತ್‌ನ ನೂತನ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ನುಡಿಗಳು. ನಾಲ್ಕು ಭಾರಿ ಶಾಸಕರಾಗಿ, ಮೂರು ಬಾರಿ ಪರಿಷತ್‌ ಸದಸ್ಯರಾಗಿರುವ ಪ್ರತಾಪ್‌ಚಂದ್ರ ಶೆಟ್ಟಿ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಸಭಾಪತಿ ಸ್ಥಾನಕ್ಕೆ ನ್ಯಾಯ ಒದಗಿಸುವಂತೆ ಕಾರ್ಯನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂದರ್ಶನದ ಸಂಕ್ಷಿಪ್ತ ವಿವರ ಹೀಗಿದೆ.

ಪ್ರಶ್ನೆ: ಸಭಾಪತಿ ಸ್ಥಾನ ಅನಿರೀಕ್ಷಿತವಾಗಿ ಒಲಿದಿರುವುದಕ್ಕೆ ಏನು ಹೇಳುವಿರಿ?
ನಾನು ಸಭಾಪತಿ ಸ್ಥಾನದ ನಿರೀಕ್ಷೆಯಲ್ಲಿರಲಿಲ್ಲ. 32 ವರ್ಷ ಶಾಸಕ, ವಿಧಾನ ಪರಿಷತ್‌ ಸದಸ್ಯನಾಗಿ ಸಲ್ಲಿಸಿದ ಕಾರ್ಯವನ್ನು ಪರಿಗಣಿಸಿ ಪಕ್ಷವೇ ಅವಕಾಶ ನೀಡಿದೆ ಎಂದು ಭಾವಿಸಿದ್ದೇನೆ.

ಪ್ರಶ್ನೆ: ವಿಧಾನಸಭೆ, ಪರಿಷತ್‌ ಎರಡೂ ಕಡೆ ಸದಸ್ಯರಾದ ಅನುಭವವಿರುವ ತಮಗೆ ಸಭಾಪತಿಯಾಗಿ ಯಾವ ಬದಲಾವಣೆ ತರಬೇಕು ಎಂದುಕೊಂಡಿದ್ದೀರಿ?
ಸದನದಲ್ಲಿ ರಾಜಕಾರಣ ಮಾಡುವುದಕ್ಕಿಂತ ಜನರಿಗೆ ಸ್ಪಂದಿಸುವುದು ಮುಖ್ಯ. ಹಾಗಾಗಿ ಜನಪರ ವಿಚಾರಗಳ ಚರ್ಚೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಸಮಸ್ಯೆಗಳನ್ನು ಗುರುತಿಸುವುದು, ಆರೋಪಿಸುವುದು ಸುಲಭ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಹಾಗಾಗಿ ಸರ್ಕಾರ, ವ್ಯವಸ್ಥೆ ಹೇಗಿರಬೇಕು, ಆಗಬೇಕಿರುವ ಸುಧಾರಣೆ, ಪರಿಹಾರ ಕ್ರಮಗಳ ಬಗ್ಗೆ ಸಲಹೆ, ಸೂಚನೆ ನೀಡಲು, ಚರ್ಚಿಸಲು ಹೆಚ್ಚು ಸಮಯ ನೀಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.

ಪ್ರಶ್ನೆ: ಕರಾವಳಿ ಭಾಗದವರೇ ಸಭಾನಾಯಕರು, ಪ್ರತಿಪಕ್ಷನಾಯಕರು, ಸಭಾಪತಿಯಾಗಿರುವ ಸಂದರ್ಭದ ಬಗ್ಗೆ ಏನು ಹೇಳುವಿರಿ?
ಇದು ಕಾಕತಾಳೀಯವಷ್ಟೇ. ಜಯಮಾಲಾ ಅವರು ಸಭಾನಾಯಕಿಯಾಗಿದ್ದಾರೆ. ನಾನು, ಕೋಟ ಶ್ರೀನಿವಾಸ ಪೂಜಾರಿಯವರು ಒಂದೇ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಗೆದ್ದುಬಂದವರು. ಅನ್ಯ ಪಕ್ಷದಲ್ಲಿದ್ದರೂ ನಮ್ಮಿಬ್ಬರಿಗೂ ಪರಸ್ಪರರ ಮೇಲೆ ನಂಬಿಕೆ, ವಿಶ್ವಾಸವಿದೆ. ರಾಜಕೀಯವಾಗಿ ಅವರು ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಸಂದರ್ಭ, ಸನ್ನಿವೇಶಕ್ಕೆ ಪೂರಕವಾಗಿ ಸಭಾಪತಿ ಸ್ಥಾನ ಹಾಗೂ ಸದನದ ಗೌರವ ಎತ್ತಿ ಹಿಡಿಯುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ.

Advertisement

ಪ್ರಶ್ನೆ: ಸಮಯ ಪಾಲನೆ, ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡುವ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ತರುವಿರಾ?
ಸಭಾಪತಿ ಸ್ಥಾನದಲ್ಲಿ ಕುಳಿತಾಗ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಾಗುತ್ತದೆ. ಹೊಸ, ಯುವ ಸದಸ್ಯರಿಗೆ ಹೆಚ್ಚು ಅವಕಾಶ ನೀಡಿದರೆ ಅವರು ಮಾತನಾಡಲು, ವಿಚಾರಗಳನ್ನು ತಿಳಿಯಲು ಅವಕಾಶವಾಗಲಿದೆ. ಜತೆಗೆ ಹಿರಿಯರಿಗೂ ಅವಕಾಶ ನೀಡಬೇಕಾಗುತ್ತದೆ. ಅವರ ಹಕ್ಕುಗಳನ್ನು ಗೌರವಿಸಬೇಕಾಗುತ್ತದೆ. ಅದರಂತೆ ಎರಡನ್ನೂ ಸರಿದೂಗಿಸಲಾಗುವುದು.

ಪ್ರಶ್ನೆ: ಪರಿಷತ್‌ನಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರದ ವಿಚಾರಗಳ ಚರ್ಚೆಗೆ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂಬ ಮಾತಿದ್ದು, ಇದಕ್ಕೆ ಏನು ಹೇಳುವಿರಿ?
ಶಿಕ್ಷಣ, ಪದವೀಧರ ಕ್ಷೇತ್ರದ ಬೇಡಿಕೆಗಳು ಜಾಸ್ತಿ ಇದ್ದು, ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳ ವಿಚಾರಗಳು ಬೇರೆ ಬೇರೆ ಹಂತದಲ್ಲಿ ಅಂದರೆ ಗ್ರಾಮಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ವಿಧಾನಸಭೆ, ವಿಧಾನ ಪರಿಷತ್‌ನಲ್ಲೂ ಚರ್ಚೆಯಾಗುತ್ತದೆ. ಆದರೆ ಶಿಕ್ಷಣ, ಪದವೀಧರ ಕ್ಷೇತ್ರದ ವಿಚಾರಗಳ ಚರ್ಚೆಗೆ ಸೀಮಿತ ವೇದಿಕೆಯಿದ್ದು, ಚರ್ಚೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಿದ್ದರೂ ಎಲ್ಲ  ಕ್ಷೇತ್ರಗಳ ವಿಚಾರ ಪ್ರಸ್ತಾಪ, ಚರ್ಚೆಗೂ ಆದ್ಯತಾನುಸಾರ ಅವಕಾಶ ಕಲ್ಪಿಸಲಾಗುವುದು.

ಪ್ರಶ್ನೆ: ಸುಗಮ ಕಲಾಪಕ್ಕೆ ನೀವು ಅನುಸರಿಸುವ ಸೂತ್ರಗಳೇನು?
ಸದನ ಕಲಾಪದಲ್ಲಿ ನೀತಿ, ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಆದ್ಯತೆ ನೀಡಲಾಗುವುದು. ಜನರ ನಿರೀಕ್ಷೆ, ಆಶಯದಂತೆ ಅಧಿವೇಶನ ನಡೆಸಬೇಕಾಗುತ್ತದೆ. ಕೆಳಮನೆಯಲ್ಲಿ ಜನರ ಭಾವನೆಗೆ ಹೆಚ್ಚು ಸ್ಪಂದನೆ ಸಿಗುತ್ತದೆ. ಶಾಸಕರು ಜನರಿಂದಲೇ ನೇರವಾಗಿ ಆಯ್ಕೆಯಾಗುವುದರಿಂದ ಅವರ ಮೇಲೆ ಜನರ ಒತ್ತಡ ಹೆಚ್ಚಿರುತ್ತದೆ. ಆ ಒತ್ತಡಕ್ಕೆ ಅನುಗುಣವಾಗಿ ಶಾಸಕರು ಕೆಳಮನೆಯಲ್ಲಿ ಕೆಲಸ ಮಾಡುತ್ತಾರೆ. ಆದರೆ ಮೇಲ್ಮನೆಯಲ್ಲಿ ಬೇರೆ ಭಾಗ, ಕ್ಷೇತ್ರ, ವಲಯ, ನಾನಾ ಚಿಂತನೆ, ವಿಚಾರಧಾರೆಗಳ ಆಧಾರದ ಮೇಲೆ ಚರ್ಚೆ ನಡೆಯುತ್ತವೆ. ಒಟ್ಟಾರೆ ಜನಾಭಿಪ್ರಾಯದಂತೆ ಕಾರ್ಯ ನಿರ್ವಹಿಸಲಾಗುವುದು. ಜನರ ದನಿಯಾಗಿ ಸದನ ನಡೆಸಲು ಒತ್ತು ನೀಡಲಾಗುವುದು.

ಪ್ರಶ್ನೆ: ಪರಿಷತ್‌ ಕಲಾಪವನ್ನು ಕಾಗದ ರಹಿತವಾಗಿ ನಡೆಸಲು ಕ್ರಮ ಕೈಗೊಳ್ಳುವಿರಾ?
ಸದನವನ್ನು ಕಾಗದರಹಿತವಾಗಿ ನಡೆಸಲು ಪ್ರಯತ್ನಿಸಲಾಗುವುದು. ಮುಖ್ಯವಾಗಿ ಇ-ವಿಧಾನ ವ್ಯವಸ್ಥೆ ಒಳ್ಳೆಯ ಕಾರ್ಯವಾಗಿದ್ದು, ಬಹುಬೇಗ ಮಾಹಿತಿ ಸಿಗಲಿದೆ. ಹಾಗಾಗಿ ಈ ವ್ಯವಸ್ಥೆ ಜಾರಿಗೊಳಿಸಿ ಸುಗಮ, ತ್ವರಿತ ಹಾಗೂ ಪಾರದರ್ಶಕವಾಗಿ ಕಲಾಪ ನಡೆಸಲು ಕ್ರಮ ವಹಿಸಲಾಗುವುದು.

– ಎಂ. ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next