ಬೆಂಗಳೂರು: ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗು ವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜೆಡಿಎಸ್‌ನ ಎಸ್. ಎಲ್. ಭೋಜೇ ಗೌಡರು ಈ ವಿಷಯ ಪ್ರಸ್ತಾವಿಸಿದ್ದಕ್ಕೆ ಉತ್ತರಿಸಿದ ಅವರು, ಈಗಾಗಲೇ ಎಫ್ಐಆರ್ ದಾಖಲಿಸಿದ ಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅಮಾನತುಗೊಳಿಸಲಾಗಿದೆ. ಉಳಿದವರ ವಿರುದ್ಧವೂ ಕ್ರಮ ಕೈಗೊಳ್ಳಲು ಪರಿಶೀಲಿಸುತ್ತೇವೆ ಎಂದರು.
ಶಿಷ್ಟಾಚಾರದ ಪ್ರಕಾರ ಸಭಾಪತಿ ಸ್ಥಾನ ಉನ್ನತವಾದುದು. ಸಾಂವಿಧಾನಿಕ ಹುದ್ದೆಗಳಲ್ಲಿರುವವರ ವಿರುದ್ಧ ದೂರು ದಾಖಲಿಸು ವಾಗ ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಅನುಸರಿಸಬೇಕು. ಹೊರಟ್ಟಿ ಅವರ ಪ್ರಕರಣದಲ್ಲಿ ಯಾವುದೂ ಪಾಲನೆಯಾಗದೇ ಲೋಪಗಳಾಗಿದ್ದು, ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.
ಅದಕ್ಕೆ ಭೋಜೆಗೌಡರು, ಬರೀ ಕೆಳಹಂತದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಬಲಿಪಶು ಮಾಡಲಾಗಿದ್ದು, ಉಳಿದ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ ಎಂದರು.
ಎಫ್ಐಆರ್ ದಾಖಲಿಸಿದ್ದಕ್ಕಾಗಿ ಅಮಾನತುಗೊಂಡಿರುವ ಪಿಎಸ್‌ಐ ದಲಿತರಾಗಿದ್ದು, ಅವರನ್ನು ಬಲಿಪಶು ಮಾಡಲಾಗಿದೆ. ಎಸ್‌ಪಿ ತಪ್ಪು ಮಾಡಿಲ್ಲವೇ ಎಂದು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು. ಈ ರೀತಿ ಹೇಳುವುದು ಸರಿಯಲ್ಲ. ಇದೊಂದು ಸೂಕ್ಷ್ಮ ವಿಚಾರ, ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.