ಮದ್ದೂರು: ಕಾರಿನಲ್ಲಿದ್ದ ವ್ಯಕ್ತಿಯೋರ್ವನಿಗೆ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಚಿನ್ನದ ಸರ ದೋಚಿ ಪರಾರಿ ಆಗಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಪಟ್ಟಣದ ಹೊರವಲಯದ ಐಶ್ವರ್ಯ ವಿದ್ಯಾಸಂಸ್ಥೆ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಕೆ.ಕೆ. ಮುತ್ತಪ್ಪ ರವರ ಬಳಿಯಿದ್ದ 3.5 ಲಕ್ಷ.ರೂ. ಮೌಲ್ಯದ 65 ಗ್ರಾಂ. ಚಿನ್ನದ ಸರವನ್ನು ಕಿತ್ತು ಸ್ಥಳದಿಂದ ಪರಾರಿಯಾಗಿದ್ದಾರೆ.
ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶುಕ್ರವಾರ ತಡರಾತ್ರಿ ತಮ್ಮ ಇನೋವಾ ಕಾರಿನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ವಿಶ್ರಾಂತಿಗಾಗಿ ಐಶ್ವರ್ಯ ವಿದ್ಯಾಸಂಸ್ಥೆ ಬಳಿ ಕೆಲಹೊತ್ತು ಸರ್ವಿಸ್ ರಸ್ತೆಯಲ್ಲಿ ಕಾರುನಿಲ್ಲಿಸಿದ್ದ ವೇಳೆ ಏಕಾಏಕಿ ಬಂದ ಮೂರು ಮಂದಿ ದುಷ್ಕರ್ಮಿಗಳು ತಾವು ಪೊಲೀಸರಾಗಿದ್ದು ಮದ್ಯಪಾನ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದು ತಮ್ಮನ್ನು ತಪಾಸಣೆ ಮಾಡಬೇಕೆಂದು ಬಲವಂತವಾಗಿ ಕಾರಿನ ಬಾಗಿಲನ್ನು ತೆಗೆಸಿದ್ದಾರೆ. ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ಒಳ ಪ್ರವೇಶಿಸಿದ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಮುತ್ತಪ್ಪ ಅವರ ಕತ್ತಿನ ಬಳಿಯಿಟ್ಟು ಹಣ ಮತ್ತು ಚಿನ್ನಾಭರಣಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಚಿ
ನ್ನಾಭರಣಗಳನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮುತ್ತಪ್ಪ ಅವರ ಬಲಗೈ ಮತ್ತು ಕತ್ತಿನ ಬಳಿ ಗಾಯಗೊಳಿಸಿದ್ದು ಇದರಿಂದ ಆತಂಕಗೊಂಡ ಮುತ್ತಪ್ಪ ಅವರ ಬಳಿಯಿದ್ದ 65 ಗ್ರಾಂ. ಚಿನ್ನದ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕಾಗಮಿಸಿದ ಹೆದ್ದಾರಿ ಗಸ್ತು ಪೊಲೀಸರು ಮುತ್ತಪ್ಪ ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಆರೋಪಿಗಳ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಮುತ್ತಪ್ಪ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.