ಬೆಂಗಳೂರು: ಚಿನ್ನದ ಸರ ಕಸಿದುಕೊಳ್ಳುವಾಗ ಪ್ರತಿರೋಧ ತೋರಿದ ಮಹಿಳೆಗೆ ಮಾರಕಾಸ್ತ್ರದಿಂದ ಹಲ್ಲೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿಯ ಎನ್.ಆರ್. ಕೊಳಗೇರಿ ನಿವಾಸಿ ಮನೋಜ್ ಕುಮಾರ್ (25) ಮತ್ತು ಫ್ರಾಂಕ್ಲಿನ್ (21) ಬಂಧಿತರು.
ಆರೋಪಿಗಳು ಮಾ.6 ರಂದು ರಾತ್ರಿ 9 ಗಂಟೆ ಸುಮಾರಿಗೆ ಪುಟ್ಟೇನಹಳ್ಳಿ ಕೆರೆ ಬಳಿ ಸರೋಜಮ್ಮ ಎಂಬ ಮಹಿಳೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿ ಚಿನ್ನದ ಸರ ಕಸಿಯಲು ಯತ್ನಿಸಿದ್ದರು. ಈ ವೇಳೆ ಸರೋಜಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಮಾರಕಾಸ್ತ್ರ ದಿ ಂದ ಸರೋಜಮ್ಮ ಕೈಗಳಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಘಟನೆಯಲ್ಲಿ ಸರೋಜಮ್ಮ ಕೈಗಳಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಜೆ.ಪಿ.ನಗರ 7ನೇ ಹಂತದ ನಿವಾಸಿ ಸರೋಜಮ್ಮ ಮಾ.6ರಂದು ದೇವಸ್ಥಾನಕ್ಕೆ ಬಂದು ಮನೆಗೆ ವಾಪಾಸಾಗುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ದೇವಸ್ಥಾನದಿಂದ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಪುಟ್ಟೇನಹಳ್ಳಿ ಕೆರೆ ಬಳಿ ಸರೋಜಮ್ಮನ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಸರೋಜಮ್ಮ ಸರವನ್ನು ಬಿಗಿಯಾಗಿ ಹಿಡಿದುಕೊಂಡು ಪ್ರತಿರೋಧ ತೋರಿದ್ದರು. ಆಗ ಆರೋಪಿ ಮನೋಜ್ ಕುಮಾರ್ ಮಾರಕಾಸ್ತ್ರದಿಂದ ಸರೋಜಮ್ಮರ ಎರಡೂ ಕೈಗಳಿಗೆ ಹಲ್ಲೆ ಮಾಡಿ ಬರಿಗೈಯಲ್ಲಿ ಪರಾರಿಯಾಗಿದ್ದರು.
ಈ ವೇಳೆ ಗಾಯಾಳು ಸರೋಜಮ್ಮ ನೆರವಿಗೆ ಧಾವಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಆರೋಪಿಗಳ ಪೈಕಿ ಮನೋಜ್ ಕುಮಾರ್ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈ ಹಿಂದೆ ಈತನ ವಿರುದ್ಧ ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ. ಮತ್ತೂಬ್ಬ ಆರೋಪಿ ಫ್ರಾಂಕ್ಲಿನ್‌ನ ಅಪರಾಧ ಹಿನ್ನೆಲೆ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.