Advertisement

ಸರಗಳ್ಳನನ್ನು ಹಿಡಿದ ಆಟೋ ಚಾಲಕ

10:31 AM Oct 10, 2021 | Team Udayavani |

ಬೆಂಗಳೂರು: ಮಹಿಳೆಯ ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಆಟೋ ಚಾಲಕರೊಬ್ಬರು ಸುಮಾರು 2 ಕಿ.ಮೀ. ಹಿಂಬಾಲಿಸಿ ಹಿಡಿದು ಪೊಲೀಸರಿಗೊಪ್ಪಿಸಿರುವ ಪ್ರಶಂಸನಿಯ ಪ್ರಸಂಗ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾಬಸಪೇಟೆ ನಿವಾಸಿ ಕೇಶವಮೂರ್ತಿ(31)

Advertisement

ಬಂಧಿತ. ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 9.5 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಗ್ಯಾಸ್‌ ಸಿಲಿಂಡರ್‌ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್‌ ಎಂಬುವರು ಸುಮಾರು 2ಕಿ.ಮೀ. ಹಿಂಬಾಲಿಸಿ ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೊಪ್ಪಿಸಿದ್ದಾರೆ.

ರುದ್ರೇಶ್‌ ಕಾರ್ಯಕ್ಕೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಚಿಕ್ಕಬಾಣವಾರ ನಿವಾಸಿ ಪುಷ್ಪಾ (32) ತಮ್ಮ ಒಂದು ವರ್ಷದ ಮಗುಹಾಗೂ ಪಕ್ಕದ ಮನೆಯ ಮಹಿಳೆಯೊಬ್ಬರ ಸಮೀಪದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯಕ್ಕೆ ನಡೆದುಕೊಂಡು ಹೋಗಿ, ವಾಪಸ್‌ ಬರುತ್ತಿದ್ದರು.

ಇದನ್ನೂ ಓದಿ;- ಭೂಕಂಪ ಅನಾಹುತಕ್ಕೆ ಸರ್ಕಾರವೇ ಹೊಣೆ

ಈ ವೇಳೆ ಹಿಂದಿನಿಂದ ಬಂದ ಆರೋಪಿ, ಪುಷ್ಪಾ ಅವರ ಚಿನ್ನದ ಸರ ಕಸಿದುಕೊಂಡಿದ್ದಾನೆ. ಆಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಆರೋಪಿ, ಮಗುವಿನ ಸಮೇತ ಮಹಿಳೆಯನ್ನು ತಳ್ಳಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಅದರಿಂದ ಮಹಿಳೆಯ ಕೈ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಆರೋಪಿ ಓಡುವಾಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ.

Advertisement

ಅಲ್ಲೇ ಇದ್ದ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್‌ ಆರೋಪಿಯನ್ನು ಸುಮಾರು ಎರಡು ಕಿ.ಮೀಟರ್‌ ಹಿಂಬಾಲಿಸಿದ್ದಾರೆ. ಆಗ ಆರೋಪಿ ಬಡಿಗೆಯಿಂದ ರುದ್ರೇಶ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೂ ಬಿಡದ ರುದ್ರೇಶ್‌ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಎಂ.ಜೆ.ಶಿವರಾಜು ಮತ್ತು ತಂಡ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ಪಿಯುಸಿ ವ್ಯಾಸಂಗ ಮಾಡಿದ್ದು, ನರ್ಸಿಂಗ್‌ ಹೋಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಯಾವುದೇ ಕೆಲಸವಿಲ್ಲದೆ, ಜೀವನ ನಿರ್ವಹಣೆಗಾಗಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಬಹುಮಾನ ಘೋಷಣೆ

ಧೈರ್ಯ ಪ್ರದರ್ಶಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಆಟೋ ಚಾಲಕ ರುದ್ರೇಶ್‌ಗೆ ನಗರ ಪೊಲೀಸ್‌ ಆಯುಕ್ತರು ಮತ್ತು ಉತ್ತರ ವಿಭಾಗ ಉಪ ಪೊಲೀಸ್‌ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next