Advertisement

ಚಹರ್‌: ಮೂರೇ ದಿನದಲ್ಲಿ ಎರಡನೇ ಹ್ಯಾಟ್ರಿಕ್‌!

11:41 AM Nov 14, 2019 | Team Udayavani |

ತಿರುವನಂತಪುರ: ಭಾರತದ ಮಧ್ಯಮ ವೇಗಿ ದೀಪಕ್‌ ಚಹರ್‌ ಮತ್ತೆ ಸುದ್ದಿಯಾಗಿದ್ದಾರೆ, ಅದೂ ಹ್ಯಾಟ್ರಿಕ್‌ ಪರಾಕ್ರಮದ ಮೂಲಕವೇ!
ಬಾಂಗ್ಲಾದೇಶ ವಿರುದ್ಧದ ನಾಗ್ಪುರ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಮೆರೆದ ದೀಪಕ್‌ ಚಹರ್‌, ಮೂರೇ ದಿನಗಳಲ್ಲಿ ಮತ್ತೂಂದು ಹ್ಯಾಟ್ರಿಕ್‌ ಗಳಿಸಿದ್ದಾರೆ. ಮಂಗಳವಾರ ಇಲ್ಲಿ ನಡೆದ ವಿದರ್ಭ ವಿರುದ್ಧದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯದಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸಿದ ಚಹರ್‌ ಒಂದೇ ಓವರಿನಲ್ಲಿ 4 ವಿಕೆಟ್‌ ಕಿತ್ತು ಮೆರೆದರು. ಇದರಲ್ಲಿ ಕೊನೆಯ 3 ವಿಕೆಟ್‌ ಸತತ ಎಸೆತಗಳಲ್ಲಿ ಉರುಳಿದ್ದವು.

Advertisement

ಅಂತಿಮ ಓವರ್‌ನಲ್ಲಿ ಮ್ಯಾಜಿಕ್‌
ಮಳೆಯಿಂದಾಗಿ ಈ ಪಂದ್ಯ 13 ಓವರ್‌ಗಳಿಗೆ ಸೀಮಿತಗೊಂಡಿತ್ತು. ವಿದರ್ಭ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಿತ್ತು. ಅಂತಿಮ ಓವರ್‌ ಎಸೆಯಲು ಬಂದ ಚಹರ್‌, ಮೊದಲ ಎಸೆತದಲ್ಲಿ ರಿಷಭ್‌ ರಾಠೊಡ್‌ ವಿಕೆಟ್‌ ಕಿತ್ತರು. ಕೊನೆಯ 3 ಎಸೆತಗಳಲ್ಲಿ ದರ್ಶನ್‌ ನಲ್ಕಂಡೆ, ಶ್ರೀಕಾಂತ್‌ ವಾಘ… ಮತ್ತು ಅಕ್ಷಯ್‌ ವಾಡ್ಕರ್‌ ವಿಕೆಟ್‌ ಉರುಳಿಸಿ ಹ್ಯಾಟ್ರಿಕ್‌ ಹೀರೋ ಎನಿಸಿದರು.
ದೀಪಕ್‌ ಚಹರ್‌ ಒಟ್ಟು 3 ಓವರ್‌ ಎಸೆದರು. ಇದರಲ್ಲೊಂದು ಮೇಡನ್‌ ಆಗಿತ್ತು. ಒಟ್ಟು 18 ರನ್ನಿತ್ತು 4 ವಿಕೆಟ್‌ ಉರುಳಿಸಿದರು.

ಬಾಂಗ್ಲಾದೇಶ ವಿರುದ್ಧ 7 ರನ್ನಿಗೆ 6 ವಿಕೆಟ್‌ ಉಡಾಯಿಸುವ ಮೂಲಕ ದೀಪಕ್‌ ಚಹರ್‌ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದರು. ಭಾರತದ ಮೊದಲ ಹ್ಯಾಟ್ರಿಕ್‌ ಸಾಧಕನೆಂಬ ಹಿರಿಮೆಗೂ ಪಾತ್ರರಾಗಿದ್ದರು.
ಆದರೆ ದೀಪಕ್‌ ಚಹರ್‌ ಹ್ಯಾಟ್ರಿಕ್‌ ಹೊರತಾಗಿಯೂ ರಾಜಸ್ಥಾನ ಈ ಪಂದ್ಯವನ್ನು ವಿಜೆಡಿ ನಿಯಮದಂತೆ ಒಂದು ರನ್ನಿನಿಂದ ಸೋತಿತು.

Advertisement

Udayavani is now on Telegram. Click here to join our channel and stay updated with the latest news.