ಕೇಪ್‌ಟೌನ್: ರಿಸ್ಟ್ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಮತ್ತೂಮ್ಮೆ ಹರಿಣಗಳಿಗೆ ಉರುಳಾಗಿ ಪರಿಣಮಿಸಿದ್ದಾರೆ. ಬುಧವಾರ ರಾತ್ರಿ ಕೇಪ್‌ಟೌನ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ತಲಾ 4 ವಿಕೆಟ್ ಹಾರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೌನ್ಸಿ ಟ್ರ್ಯಾಕ್‌ನಲ್ಲೂ ಇವರು ಸ್ಪಿನ್ ಮೋಡಿಗೈದುದನ್ನು ನಾಯಕ ವಿರಾಟ್ ಕೊಹ್ಲಿ ಪ್ರಶಂಸಿಸಿದ್ದಾರೆ; ಮುಂದಿನ ವರ್ಷದ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಹಲ್-ಯಾದವ್ ಜೋಡಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.
“ಇವರಿಬ್ಬರ ಸಾಧನೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಇವರಿಬ್ಬರೂ ಸೇರಿಕೊಂಡು ಎದುರಾಳಿಯ ಸುತ್ತ ಸ್ಪಿನ್ ಬಲೆ ಹೆಣೆಯುವುದೇ ಒಂದು ಅದ್ಭುತ. ಭಾರತದ ಗೆಲುವಿನ ಅಷ್ಟೂ ಶ್ರೇಯ ಈ ಸ್ಪಿನ್ ಜೋಡಿಗೆ ಸಲ್ಲಬೇಕು. ಹೇಗೆ ಬೌಲಿಂಗ್ ನಡೆಸಬೇಕು, ಯಾವ ರೀತಿಯ ಕ್ಷೇತ್ರರಕ್ಷಣೆಯನ್ನು ನಿಯೋಜಿಸಬೇಕು ಎಂಬುದನ್ನು ಇವರು ಅತ್ಯಂತ ಜಾಣ್ಮೆಯಿಂದ ನಿಭಾಯಿಸುತ್ತಾರೆ. ಖಂಡಿತವಾಗಿಯೂ ಮುಂದಿನ ವರ್ಷದ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಹಲ್-ಕುಲದೀಪ್ ಜೋಡಿಯ ಪಾತ್ರ ನಿರ್ಣಾಯಕ ಹಾಗೂ ಅತ್ಯಂತ ಮಹತ್ವದ್ದಾಗಲಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದರು.
“ಪ್ರತಿ ಓವರ್ ಎಸೆಯುವ ಮುನ್ನ ಇವರಿಬ್ಬರೂ ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್ ಕುರಿತು ಒಂದೆರಡು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ದೌರ್ಬಲ್ಯ, ಸಾಮರ್ಥ್ಯವನ್ನು ತಿಳಿದುಕೊಳ್ಳುವುದೇ ಇದರ ಉದ್ದೇಶ. ನನಗೆ ನಿಜಕ್ಕೂ ಇದು ಅಚ್ಚರಿಯಾಗಿ ಕಾಣುತ್ತದೆ. ಇದಕ್ಕಿಂತ ಮೊದಲು ನಾನು ಇದನ್ನೆಲ್ಲ ಕಂಡಿರಲೇ ಇಲ್ಲ. ತಮ್ಮ ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸ ಇರಿಸಿಕೊಂಡಿರುವ ಇವರಿಗೆ ತಂಡದ ಸಂಪೂರ್ಣ ಬೆಂಬಲವಿದೆ’ ಎಂದರು.
ಕೇಪ್‌ಟೌನ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ 160 ರನ್ ಸಾಹಸದಿಂದ 6ಕ್ಕೆ 303 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ಚಾಹಲ್-ಕುಲದೀಪ್ ಸ್ಪಿನ್ನಿಗೆ ತತ್ತರಿಸಿ 40 ಓವರ್‌ಗಳಲ್ಲಿ 179ಕ್ಕೆ ಆಲೌಟಾಗಿ 124 ರನ್ ಸೋಲನುಭವಿಸಿತು. ಚಾಹಲ್ 46ಕ್ಕೆ 4, ಕುಲದೀಪ್ 23ಕ್ಕೆ 4 ವಿಕೆಟ್ ಉರುಳಿಸಿದರು. ಚಾಹಲ್ ಹಿಂದಿನ ಪಂದ್ಯದಲ್ಲಿ 5 ವಿಕೆಟ್ ಉಡಾಯಿಸಿದ್ದರು. ಈ ಸರಣಿಯಲ್ಲಿ ಅವರ ಒಟ್ಟು ವಿಕೆಟ್ ಬೇಟೆಯೀಗ 11ಕ್ಕೆ ಏರಿದೆ. ಕುಲದೀಪ್ ಒಟ್ಟು 10 ವಿಕೆಟ್ ಉರುಳಿಸಿದ್ದಾರೆ.
ಹೀಗೊಂದು ಕಾಕಾತಾಳೀಯ ಸ್ವಾರಸ್ಯ!
ಬುಧವಾರ ಭಾರತದ ಪುರುಷರ ಹಾಗೂ ವನಿತಾ ತಂಡಗಳೆರಡೂ ದಕ್ಷಿಣ ಆಫ್ರಿಕಾವನ್ನು ಅವರದೇ ಅಂಗಳದಲ್ಲಿ ಉರುಳಿಸುವ ಮೂಲಕ ಸುದ್ದಿಯಾದವು. ಇಲ್ಲೊಂದು ಸ್ವಾರಸ್ಯ ಅಡಗಿರುವುದನ್ನು ಗಮನಿಸಬೇಕು.
ಮಿಥಾಲಿ ರಾಜ್ ನೇತೃತ್ವದ ವನಿತಾ ತಂಡ ಕಿಂಬರ್ಲಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 303 ರನ್ನುಗಳ ಗುರಿ ನೀಡಿತು. ಇತ್ತ ಕೊಹ್ಲಿ ಪಡೆ ಕೇಪ್‌ಟೌನ್‌ನಲ್ಲಿ 6ಕ್ಕೆ 303 ರನ್ ಪೇರಿಸಿತು. ವನಿತೆಯರು ಎದುರಾಳಿಯನ್ನು 124ಕ್ಕೆ ಆಲೌಟ್ ಮಾಡಿದರು. ಪುರುಷರ ತಂಡ 124 ರನ್ನುಗಳ ಅಂತರದಿಂದ ಗೆದ್ದು ಬಂದಿತು!
ವನಿತಾ ತಂಡ ಸರಣಿ ಗೆದ್ದು ಇತಿಹಾಸ ನಿರ್ಮಿಸಿದರೆ, ಸರಣಿ ಸೋಲಿನಿಂದ ದೂರವಾಗಿರುವ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ.