Advertisement

ಸೌಜನ್ಯ ರಾಗದ ಚಂದ್ರಾವಳಿ ಅಮಿತ ಚೈತನ್ಯದ ಲವಕುಶ 

06:00 AM Sep 07, 2018 | |

ಚಂದ್ರಾವಳಿ  ಪುರಾಣದಲ್ಲಿ ಉಲ್ಲೇಖಿತ ಪ್ರಸಂಗ ಅಲ್ಲದಿದ್ದರೂ ಅದಕ್ಕೊಂದು ಚಂದದ ಸಂದೇಶದ ರೂಪ ನೀಡಿ ಹೆಣ್ಣು ಮಕ್ಕಳಿಗೆ ರೂಪದ ಕುರಿತು ಅಹಂಕಾರ ಇರಬಾರದು, ಸೌಂದರ್ಯದ ಮದ ಏರಬಾರದು ಎಂಬ ಸಂದೇಶವನ್ನು ನೀಡುವ ಕಥಾನಕವಾಗಿಸಿ ಪ್ರದರ್ಶಿಸಲಾಗುತ್ತದೆ.

Advertisement

ಉಡುಪಿಯ ಕಿದಿಯೂರು ಹೋಟೆಲ್‌ ಸಭಾಂಗಣ ನಿಗದಿತ ಸಮಯಕ್ಕಿಂತ ಮುಂಚೆಯೇ ಭರ್ತಿಯಾಗಿತ್ತು. ಇಲ್ಲಿನ ಜನ ಅದೆಷ್ಟೋ ಬಾರಿ ನೋಡಿದ ಪ್ರಸಂಗವೇ ಚಂದ್ರಾವಳಿ ವಿಲಾಸ. ಹಾಗಿದ್ದರೂ ನಕ್ಕುನಗಿಸುವ ಪ್ರಸಂಗದ ಮೂಲಕ ಮತ್ತೂಮ್ಮೆ ನಕ್ಕು ಹಗುರಾಗಲು ಜನ ಆಗಮಿಸಿದ್ದರು. ಪ್ರೇಕ್ಷಕರ ನಿರೀಕ್ಷೆಯನ್ನು ಕಲಾವಿದರು ಹುಸಿ ಮಾಡಲಿಲ್ಲ. ಅದಕ್ಕೆ ಮೆಚ್ಚುಗೆ ಸೂಚಿಸಿದ್ದು ತುಂಬಿ ತುಳುಕಿದ ಸಭಾಂಗಣ. 

ಮಧುರ ಕಂಠದ ಹಿರಿಯ ಭಾಗವತ ಸುರೇಶ್‌ ಶೆಟ್ಟಿ ಅವರ ಭಾಗವತಿಕೆಯಲ್ಲಿ ಶಿವಾನಂದ ಕೋಟ ಚೆಂಡೆ, ಎನ್‌.ಜಿ.ಹೆಗಡೆ ಅವರ ಮದ್ದಳೆಯಲ್ಲಿ ಸುಶ್ರಾವ್ಯ ಹಿಮ್ಮೇಳ. ಅಷ್ಟೇ ಚಂದದ ಪ್ರಸ್ತುತಿ ಮುಮ್ಮೇಳದಿಂದ. ಕೃಷ್ಣನ (ದಿನೇಶ್‌ ಕನ್ನಾರು)ಪ್ರವೇಶ, ಇಂಪಾದ ಭಾಗವತಿಕೆಗೆ ವೈವಿಧ್ಯಮಯ ನಾಟ್ಯ ಪ್ರೇಕ್ಷಕರಿಗೆ ಮಹದಾನಂದ ಉಂಟು ಮಾಡಿತು. ಹಳ್ಳಾಡಿಯವರ ಚಂದಗೋಪ, ರಮೇಶ್‌ ಭಂಡಾರಿ ಅವರ ಅಜ್ಜಿ ಜತೆಗೂಡುವಿಕೆ ಎಂದೂ ಸೇರಿದವರಿಗೆ ನಗೆಗೆ ಮೋಸ ಮಾಡದ ಸಾಂಗತ್ಯ. ಅದಕ್ಕೊಪ್ಪುವಂತೆ ತೆಂಕು ಬಡಗಿನಲ್ಲಿ ಹೆಸರು ಗಳಿಸಿದ ಹಿಲಿಯಾಣ ಸಂತೋಷ್‌ ಅವರ ಚಂದ್ರಾವಳಿ, ದಿನೇಶ್‌ ಹೆನ್ನಾಬೈಲು ಅವರ ರಾಧೆ. ಕಾಲಮಿತಿಯಲ್ಲಿ ಒಟ್ಟು ಪ್ರಸಂಗ ಮುಗಿಸುವ ಅವಸರ ಕಂಡರೂ ಎಲ್ಲೂ ಕಥೆಗೆ ಲೋಪವಾಗದಂತೆ ಕೊಂಡೊಯ್ಯುವಲ್ಲಿ ಕಲಾವಿದರ ಪಾಲು ದೊಡ್ಡದಿತ್ತು. ಚಂದ್ರಾವಳಿ  ಪುರಾಣದಲ್ಲಿ ಉಲ್ಲೇಖೀತ ಪ್ರಸಂಗ ಅಲ್ಲದಿದ್ದರೂ ಅದಕ್ಕೊಂದು ಚಂದದ ಸಂದೇಶದ ರೂಪ ನೀಡಿ ಹೆಣ್ಣು ಮಕ್ಕಳಿಗೆ ರೂಪದ ಕುರಿತು ಅಹಂಕಾರ ಇರಬಾರದು , ಸೌಂದರ್ಯದ ಮದ ಏರಬಾರದು ಎಂಬ ಸಂದೇಶವನ್ನು ನೀಡುವ ಕಥಾನಕವಾಗಿಸಿ ಪ್ರದರ್ಶಿಸಲಾಗುತ್ತದೆ. ಸಂಪ್ರದಾಯವಾದಿ ಯಕ್ಷಗಾನ ವಾದಿಗಳು ಈ ಪ್ರಸಂಗದ ಪ್ರದರ್ಶನ ಒಪ್ಪುವುದಿಲ್ಲ. ಆದರೆ ಅಂತಹ ಕಟು ವಿಮರ್ಶೆ ಬದಲಿಗೆ ಸಂದೇಶ ಸಾರುವ ಯಕ್ಷಗಾನ ಹಾಗೂ ಯಕ್ಷಗಾನವೇ ಒಂದು ಪ್ರದರ್ಶನ ಕಲೆ ಎಂಬ ನಿಟ್ಟಿನಲ್ಲಿ ಸ್ವೀಕಾರಾರ್ಹ. 

ಎರಡನೆ ಯಕ್ಷಗಾನವಾಗಿ ಲವಕುಶ ನಡೆಯಿತು. ಚಂದ್ರಕಾಂತ ಮೂಡುಬೆಳ್ಳೆಯವರು ಭಾಗವತಿಕೆಯಲ್ಲಿ ಹೊಸಮೈಲಿಗಲ್ಲನ್ನು ಸ್ಥಾಪಿಸುತ್ತಿದ್ದು ಅವರ ಅಭಿಮಾನಿ ಬಳಗವನ್ನು ನಿರಾಸೆ ಮಾಡಲಿಲ್ಲ. ಎನ್‌.ಜಿ. ಹೆಗಡೆ ಹಾಗೂ ಸುಬ್ರಹ್ಮಣ್ಯ ಭಂಡಾರಿ ಅವರ ಹಿಮ್ಮೇಳದಲ್ಲಿ ಲವನಾಗಿ ಚಂದ್ರಹಾಸ ಗೌಡ, ಕುಶನಾಗಿ ರಾಜೇಶ್‌ ಭಂಡಾರಿ ಗುಣವಂತೆ ಅಶ್ವಮೇಧದ ಹಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅವರ ಜತೆಗಿದ್ದ ವಟುವಾಗಿ ಅರುಣ್‌ ಜಾರ್ಕಳ ಸಾಂದರ್ಭಿಕವಾಗಿ ರಂಜಿಸಿದರು. ನಾಗರಾಜ ಭಂಡಾರಿಯವರ ಶತ್ರುಘ್ನ, ಜಪ್ತಿ ಹರೀಶ್‌ ಮೊಗವೀರ ಅವರ ಪುಷ್ಕಳ,ದಿನೇಶ್‌ ಕನ್ನಾರು ಅವರ ಚಂದ್ರಕೇತ ಪಾತ್ರಗಳಾಗಿ ಅಚ್ಚುಕಟ್ಟಾದ ಅಭಿನಯವಾದರೆ ರಾಮನಾಗಿ ಬಳ್ಕೂರು ಕೃಷ್ಣಯಾಜಿ ನೆನಪಿನಲ್ಲಿ ಉಳಿಯುವ ಮಾತುಗಾರಿಕೆ. ವಾಲ್ಮೀಕಿಯಾಗಿ ನರಸಿಂಹ ಗಾಂವ್ಕರ್‌, ಸೀತೆಯಾಗಿ ಉಳ್ಳೂರು ಶಂಕರ್‌ ದೇವಾಡಿಗ ಅವರು ಒಟ್ಟು ಪ್ರಸಂಗದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಲವ ಕುಶರ ಗತ್ತುಗಾರಿಕೆ, ವಾಲ್ಮೀಕಿಯ ವಾಗ್‌ವೈಖರಿ, ಸೀತೆಯ ತುಮುಲ, ರಾಮನ ಬದ್ಧತೆ ಎಲ್ಲವೂ ಮನೋಹರವಾಗಿತ್ತು. 
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಸಹಿತ ಐದು ಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆ ದಂಪತಿಗೆ ಶೇಷಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಿತು. 

 ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next