Advertisement

ಹಣ್ಣು ಬೆಳೆದು ಹಣ್ಣಾದ ಅನ್ನದಾತರು

12:07 PM Apr 26, 2020 | Naveen |

ಚಡಚಣ: ಕೋವಿಡ್ ಭೀತಿಗೆ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರಿಂದ ವ್ಯಾಪಾರ-ವಹಿವಾಟು ಸೇರಿದಂತೆ ಜನಜೀವನ ಆಸ್ತವ್ಯಸ್ತಗೊಂಡಿದೆ. ಇದರ ಪರಿಣಾಮ ಕೃಷಿ ಮೇಲೂ ಆಗುತ್ತಿದೆ. ಸೂಕ್ತ ಮಾರುಕಟ್ಟೆ ಸಿಗದೇ ಹಣ್ಣು, ತರಕಾರಿ ಇತರೆ ಬೆಳೆ ಬೆಳೆದ ರೈತರು ಮತ್ತಷ್ಟು ಸಾಲದ ಕೂಪಕ್ಕೆ ಸಿಲುಕುವಂತಾಗಿದೆ.

Advertisement

ಸಮೀಪದ ದೇವರ ನಿಂಬರಗಿ ಗ್ರಾಮದ ರೈತ ಶಬ್ಬೀರ್‌ ಗಜ್ಬರ್‌ ಮುಲ್ಲಾ ನಾಲ್ಕು ಎಕರೆ ಜಮೀನು ಹೊಂದಿದ್ದು, ಎರಡು ಎಕರೆ ಜಮೀನಿನಲ್ಲಿ ಇದೇ ಪ್ರಥಮ ಬಾರಿಗೆ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಇದಕ್ಕಾಗಿ 4 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಕಲ್ಲಂಗಡಿ ಬೆಳೆ ಉತ್ತಮವಾಗಿ ಬೆಳೆದಿದ್ದು, 5ರಿಂದ 6 ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‌ಡೌನ್‌ ದಿಂದಾಗಿ ಸೂಕ್ತ ಮಾರುಕಟ್ಟೆ ಸಿಗದ್ದರಿಂದ ಮತ್ತು ಮಾರಾಟಗಾರರು ಹಣ್ಣುಗಳನ್ನು ಖರೀದಿಸಲು ಮುಂದೆ ಬಾರದ್ದರಿಂದ ಹಣ್ಣು ತೋಟದಲ್ಲೇ ಕೊಳೆಯುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೋವಿಡ್ ಮಹಾಮಾರಿ ಬೆವರು ಹರಿಸಿ ದುಡಿವ ಅನ್ನದಾತನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತೆ ಮಾಡಿದೆ. ರೈತರು ಬೆಳೆದ ಬೆಳೆ ಮಾರಾಟಕ್ಕೆ ಸರ್ಕಾರ ಮಾರಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ. ಇದೇ ಗ್ರಾಮದ ಇನ್ನೋರ್ವ ರೈತ ಅಲ್ಲಿಸಾಬ್‌ ಭಂಡರಕವಟೆ ಎರಡು ಎಕರೆ ಹೊಲದಲ್ಲಿ 1400
ಪೇರು ಗಿಡಗಳನ್ನು ಬೆಳೆಸಿದ್ದಾನೆ. ಇದಕ್ಕಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ರೈತನ ಶ್ರಮಕ್ಕೆ ಪ್ರತಿಫಲವಾಗಿ ಉತ್ತಮ ಪೇರು ಬೆಳೆಯೂ ಸಹ ಬಂದಿದೆ. ಆದರೆ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ. ನಿತ್ಯ ಹತ್ತಾರೂ ಟ್ರೇಗಳಷ್ಟು ಪೇರು ಹಣ್ಣು ಗಿಡದಿಂದ ಬಿದ್ದು ಹಾಳಾಗುತ್ತಿವೆ. ಇದರಿಂದ ಮನನೊಂದ ರೈತ ಪೇರು ಹಣ್ಣುಗಳನ್ನು ದನ-ಕರುಗಳಿಗೆ ತಿನ್ನಲು ಹಾಕುತ್ತಿದ್ದಾನೆ. ಹಿಂದಿನ ಬಾರಿ ಪೇರು ಹಣ್ಣುಗಳಿಂದ ಒಂದು ಲಕ್ಷ ಲಾಭ ಬಂದಿತ್ತು, ಹಿಂದಿನ ವರ್ಷಕ್ಕಿಂತ ಈ ವರ್ಷ ಫಲವತ್ತಾದ ಬೆಳೆ ಬಂದಿದ್ದು, ಹಣ್ಣುಗಳೂ ಉತ್ತಮವಾಗಿವೆ. ಹೀಗಾಗಿ ಸುಮಾರು 5 ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಕೊರೊನಾ ಮಾರಿ ಇದಕ್ಕೆ ತಣ್ಣೀರೆರೆಚಿದೆ ಎನ್ನುತ್ತಾರೆ ರೈತರು.

ಈ ಭಾಗದ ರೈತರು ಬೆಳೆದ ಬೆಳೆ ಮಾರಾಟವಾಗದೇ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೆಳೆ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಕಾರ್ಯ ಮಾಡುವಂತಾಗಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಶಿವಯ್ಯ ಐ. ಮಠಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next