ರಾಯಪುರ : ಛತ್ತೀಸ್‌ಗಢ ವಿಧಾನಸಭೆಯ 18 ಕ್ಷೇತ್ರಗಳಿಗೆ ಇಂದು ಸೋಮವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು ನಿಧಾನಗತಿಯಲ್ಲಿ ಸಾಗಿರುವ ಮತದಾನದಲ್ಲಿ ಮೊದಲ ಒಂದು ತಾಸಿನ ಅವಧಿಯಲ್ಲಿ ಶೇ.14ರಷ್ಟು ಮತದಾನವಾಗಿದೆ ಎಂದು ವರದಿಗಳು ತಿಳಿಸಿವೆ.
ದಾಂತೇವಾಡ ಜಿಲ್ಲೆಯಲ್ಲಿ ಇಂದು ನಸುಕಿನ ವೇಳೆ ನಕ್ಸಲರು ಸುಧಾರಿತ ಸ್ಫೋಟಕ ಸಿಡಿಸುವ ಮೂಲಕ ಚುನಾವಣೆಯನ್ನು ಜನರು ಬಹಿಷ್ಕರಿಸಬೇಕೆಂಬ ತಮ್ಮ ಕರೆಗೆ ಕಿಡಿ ಹಚ್ಚಿದ್ದಾರೆ.
ಬಸ್ತಾರ್ ವಿಭಾಗದ 9 ಸ್ಥಾನಗಳು ಮತ್ತು ರಾಜನಂದಗಾಂವ್ ಜಿಲ್ಲೆಯ ಒಂದು ಸೀಟಿಗೆ ಮತ್ತು ಇತರೆಡೆಗಳ 8 ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.
ತಾಂತ್ರಿಕ ಅಡಚಣೆಗಳಿಂದಾಗಿ ನಿಷ್ಕ್ರಿಯವಾಗಿದ್ದ ಸುಮಾರು 31 ಇವಿಎಂ ಗಳು ಮತ್ತು 61 ವಿವಿಪ್ಯಾಟ್ ಉಪಕರಣಗಳನ್ನು ಬದಲಾಯಿಸಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚುನಾವಣೆ ಪ್ರಯುಕ್ತ ಭದ್ರತೆಗಾಗಿ 1.25 ಲಕ್ಷ ಪೊಲೀಸರನ್ನು ನಿಯೋಜಿಸಲಾಗಿದೆ. ಇವರನ್ನು ನಕ್ಸಲ್ ಪೀಡಿತ ಬಸ್ತಾರ್, ಕಂಕೇರ್, ಸುಕ್‌ಮಾ, ಬಿಜಾಪುರ್, ದಾಂತೇವಾಡ,ನಾರಾಯಣಪುರ, ಕೊಂಡಗಾಂವ್ ಮತ್ತು ರಾಜನಂದಗಾಂವ್ ಸೇರಿದಂತೆ 18 ವಿಧಾನಸಭಾ ಕ್ಷೇತ್ರಗಳ ಉದ್ದಗಲದಲ್ಲಿ ಚುನಾವಣಾ ಭದ್ರತೆಯ ಕರ್ತವ್ಯಕ್ಕೆ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.