Advertisement

ಚಂಡಮಾರುತ ಸಂತ್ರಸ್ತರಿಗೆ ಸಿಎಫ್ಟಿಆರ್‌ಐನಿಂದ ಸಿದ್ಧ ಆಹಾರ

09:37 PM May 05, 2019 | Team Udayavani |

ಮೈಸೂರು: ಫೋನಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸಂತ್ರಸ್ತರಾಗಿರುವವರಿಗೆ ಸಿದ್ಧ ಆಹಾರ ಪೂರೈಕೆ ಮಾಡಲು ಮೈಸೂರಿನ ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್‌ಐ) ಸಿದ್ಧತೆ ನಡೆಸಿದೆ.

Advertisement

ಈಗಾಗಲೇ 5ಟನ್‌ ಆಹಾರ ಸಿದ್ಧಗೊಂಡಿದ್ದು, ಮೇ 6 ರಂದು ವಿಮಾನದ ಮೂಲಕ ಮೊದಲ ಹಂತದ ಸಿದ್ಧ ಆಹಾರ ಕಳುಹಿಸಲಿದೆ. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಸಂತ್ರಸ್ತರಿಗೆ ಆಹಾರ ಒದಗಿಸಲು ಸಿಎಫ್ಟಿಆರ್‌ಐ ವಿಜ್ಞಾನಿಗಳು ಮತ್ತು ವಿಜ್ಞಾನಿಗಳು ಶನಿವಾರದಿಂದಲೇ ಆಹಾರ ತಯಾರಿಕೆಯಲ್ಲಿ ತೊಡಗಿದ್ದಾರೆ.

800 ಮಂದಿಯಿಂದ ಕಾರ್ಯ: 1 ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡುವ ನಿಟ್ಟಿನಲ್ಲಿ 800 ಮಂದಿ ರಾತ್ರಿ- ಹಗಲು ಆಹಾರ ತಯಾರಿಕೆಯಲ್ಲಿ ನಿರತರಾಗಿದ್ದು, ಅವಲಕ್ಕಿ (ಇಂಮ್ಲಿ ಪೋಹ), ಉಪ್ಪಿಟ್ಟು (ರೆಡಿ ಟು ಇಟ್‌), ಉಪ್ಪಿಟ್ಟು (ರೆಡಿ ಟು ಕುಕ್‌), ಚಪಾತಿ, ಟೊಮೆಟೋ ಚಟ್ನಿ, ಹೈ ಪ್ರೋಟಿನ್‌ ರಸ್ಕ್ ಮತ್ತು ಬಿಸ್ಕತ್‌ ತಯಾರಾಗುತ್ತಿದೆ ಎಂದು ಸಿಎಫ್ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್‌.ರಾಘವ ರಾವ್‌ ಮಾಹಿತಿ ನೀಡಿದರು.

7 ರೀತಿಯ ಆಹಾರ ತಯಾರಿಕೆ: ಫೋನಿ ಚಂಡ ಮಾರುತದ ಕುರಿತು ಶುಕ್ರವಾರ ವಿಷಯ ತಿಳಿಯಿತು. ಅಂದೇ ಸಿಎಸ್‌ಆರ್‌ಐ ನಿರ್ದೇಶನ ಬಂತು. ಅದರಂತೆ ಶುಕ್ರವಾರವೇ ತುರ್ತು ಸಭೆ ನಡೆಸಿ, ಏನೇನು ಆಹಾರ ಪೂರೈಕೆ ಮಾಡಬೇಕೆಂದು ತೀರ್ಮಾನಿಸಿ, 7 ತರಹದ ಆಹಾರ ತಯಾರಿಸಲಾಗುತ್ತಿದೆ.

25 ಟನ್‌ ಆಹಾರ ಪೂರೈಸಲಿದ್ದೇವೆ. ಜೊತೆಗೆ ಕೇರಳದ ವೈನಾಡಿನಲ್ಲಿ ನಮ್ಮದೇ ತಂತ್ರಜ್ಞಾನದಲ್ಲಿ ಚಪಾತಿ ತಯಾರಿಕೆ ನಡೆಯುತ್ತಿದ್ದು, 20 ಸಾವಿರ ಚಪಾತಿ ಪ್ಯಾಕೆಟ್‌ (4 ಚಪಾತಿ) ಪೂರೈಸುತ್ತಿದ್ದಾರೆ. ಉಳಿದಂತೆ ಎಲ್ಲಾ ಪದಾರ್ಥಗಳನ್ನು ಸಿಎಫ್ಟಿಆರ್‌ಐನಲ್ಲೇ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಮಾತುಕತೆ ನಡೆಯುತ್ತಿದೆ: ಒಟ್ಟು 1 ಲಕ್ಷ ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿದ್ದು, ಒಂದು ಪೊಟ್ಟಣದಲ್ಲಿ 2 ಚಪಾತಿ, ಟೊಮೆಟೋ ಚಟ್ನಿ, ನಾಲ್ಕು ಹೈ ಪ್ರೋಟಿನ್‌ ಬಿಸ್ಕತ್‌, ರಸ್ಕ್, ರೆಡಿ ಟು ಇಟ್‌ ಉಪ್ಪಿಟ್ಟು ಇರುತ್ತದೆ.

ನಾವು ಒಟ್ಟಾಗಿ 25 ಟನ್‌ ಆಹಾರ ಕಳುಹಿಸುತ್ತೇವೆ. ಅಲ್ಲಿನ ಸ್ಥಳೀಯ ಸಂಸ್ಥೆಗಳು ವಿತರಿಸುತ್ತವೆ. ಮೇ 6ರಂದು ಮೊದಲ ಹಂತದ ಸಿದ್ಧ ಆಹಾರ ಕಳುಹಿಸಲಾಗುತ್ತಿದೆ. ವಿಮಾನದಲ್ಲೇ ಕಳುಹಿಸಲು ಭಾರತೀಯ ವಾಯು ಪಡೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದರು.

ಸಿಬ್ಬಂದಿ ಕುಟುಂಬ ಭಾಗಿ: ಫೋನಿ ಚಂಡ ಮಾರುತ ಸಂತ್ರಸ್ತರಿಗೆ ಆಹಾರ ತಯಾರಿಕೆಗೆ ಹೆಚ್ಚಿನ ಬಲ ತುಂಬಲು ಸಿಎಫ್ಟಿಆರ್‌ಐ ಸಿಬ್ಬಂದಿಯ ಕುಟುಂಬ ಮತ್ತು ಮಕ್ಕಳು ಕಾರ್ಯನಿರತರಾಗಿದ್ದಾರೆ.

ಉಪ್ಪಿಟ್ಟು ಮತ್ತು ಅವಲಕ್ಕಿ ಪ್ಯಾಕಿಂಗ್‌ನಲ್ಲಿ ಮಕ್ಕಳು ಸೇರಿದಂತೆ ಕುಟುಂಬ ವರ್ಗ ಶ್ರಮಿಸುತ್ತಿದೆ. ಸಾಮಾನ್ಯವಾಗಿ ಮನೆಯಲ್ಲೇ ಇರುತ್ತೇವೆ. ಇಂತಹ ಮಹತ್ಕಾರ್ಯದಲ್ಲಿ ತೊಡಿಸಿಕೊಳ್ಳುವುದು ಪುಣ್ಯ. ಹೀಗಾಗಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಮೀನಾಕ್ಷಿ ತಿಳಿಸಿದರು.

ಒಡಿಶಾ ಭಾಗದಲ್ಲಿ ಹೆಚ್ಚು ಅಕ್ಕಿ ಉತ್ಪನ್ನ ಸೇವಿಸುತ್ತಾರೆ. ನಮ್ಮಲ್ಲಿ ಅದರ ಆಹಾರ ತಂತ್ರಜ್ಞಾನವಿಲ್ಲ. ಅದಕ್ಕಾಗಿ ಅವಲಕ್ಕಿ ಪೂರೈಕೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ಕಿ ಪಾಯಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುವುದು.
-ಡಾ.ಕೆ.ಎಸ್‌.ಎಂ.ಎಸ್‌.ರಾಘವ ರಾವ್‌, ನಿರ್ದೇಶಕ, ಸಿಎಫ್ಟಿಆರ್‌ಐ

Advertisement

Udayavani is now on Telegram. Click here to join our channel and stay updated with the latest news.

Next