Advertisement

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

09:02 PM Apr 19, 2024 | Team Udayavani |

ಬೆಂಗಳೂರು: ಎಂಜಿನಿಯರಿಂಗ್, ಕೃಷಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗಾಗಿ ಗುರುವಾರ ಮತ್ತು ಶುಕ್ರವಾರ ನಡೆದ ಸಿಇಟಿ ಪರೀಕ್ಷೆ ಸುಗಮವಾಗಿ ನಡೆದಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಪ್ರಾಥಮಿಕ ಮಾಹಿತಿ ಪ್ರಕಾರ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.

Advertisement

ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಏ.27ರ ಸಂಜೆ 5.30ರ ಒಳಗೆ keaugcet24@gmail.com ಇಲ್ಲಿಗೆ ಇ-ಮೇಲ್ ಮೂಲಕ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ಆಕ್ಷೇಪಣೆ ಸಲ್ಲಿಸುವ ಅಭ್ಯರ್ಥಿಗಳು ವಿಷಯ, ವರ್ಶನ್ ಕೋಡ್ ಮತ್ತು ಪ್ರಶ್ನೆಯ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಇದರ ಬಗ್ಗೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲಿದೆ. ಹೀಗಾಗಿ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಬ್ಬರಿಗೆ ಒಂದೇ ನೋಂದಣಿ ಸಂಖ್ಯೆ: ಪ್ರಾಧಿಕಾರದ ಸ್ಪಷ್ಟನೆ

ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಅರುಣ್ ಮತ್ತು ವೃಷಭ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಒಂದೇ ನೋಂದಣಿ ಸಂಖ್ಯೆ ನೀಡಿರುವುದರಲ್ಲಿ ಪ್ರಾಧಿಕಾರದ ತಪ್ಪೇನೂ ಇಲ್ಲ. ಇದರಲ್ಲಿ ಅರುಣ್ ಎಂಬ ವಿದ್ಯಾರ್ಥಿಯದೇ ಲೋಪವೆಂದು ಕಂಡುಬಂದಿದೆ. ಆದರೂ ಮಾನವೀಯ ದೃಷ್ಟಿಯಿಂದ ಆ ವಿದ್ಯಾರ್ಥಿಗೂ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

Advertisement

ಶಿವಮೊಗ್ಗದ ಎ.ಅರುಣ್ ಮೊದಲು ಕಲಬುರಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಅವರು ಕಾಲೇಜಿನ‌ ಮೂಲಕವೇ ಪರೀಕ್ಷಾ ಕೇಂದ್ರ ಬದಲಾವಣೆಗೆ ಕೋರಿಕೆ ಸಲ್ಲಿಸಿ, ಶಿವಮೊಗ್ಗ ಕೇಂದ್ರವನ್ನು ಬಯಸಿದ್ದರು. ಇದನ್ನು ಮನ್ನಿಸಿ ಅವರಿಗೆ ಎಸ್ಎಂಎಸ್ ಕೂಡ ಕಳಿಸಲಾಗಿತ್ತು. ಆದರೆ ಅವರು ಹೊಸ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳದೆ, ಹಳೆಯ ಪ್ರವೇಶಪತ್ರದೊಂದಿಗೆ ಕಲಬುರಗಿ ಕೇಂದ್ರಕ್ಕೆ ಹಾಜರಾಗಿದ್ದರಿಂದ ಗೊಂದಲ‌ ಉಂಟಾಗಿದೆ ಎಂದು ಪ್ರಕಟಣೆ ಹೇಳಿದೆ.

ಆದರೆ, ಅರುಣ್ ಎಂಬುವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಅವಕಾಶ ಕೊಟ್ಟ ಮೇಲೆ, ಕಲಬುರಗಿ ಕೇಂದ್ರದಲ್ಲಿ ಅವರಿಗೆ ಮೊದಲು ನೀಡಿದ್ದ ನೋಂದಣಿ ಸಂಖ್ಯೆಯನ್ನು ವೃಷಭ್ ಎಂಬ ಅಭ್ಯರ್ಥಿಗೆ ನೀಡಲಾಗಿತ್ತು ಎಂದು ಕೆಇಎ ಹೇಳಿದೆ.

ನಿಯಮಗಳ ಪ್ರಕಾರ ಸಿಬ್ಬಂದಿಯು ಅರುಣ್ ಗೆ ಮೊದಲು ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆದರೆ ಆತನ ಭವಿಷ್ಯವನ್ನು ಪರಿಗಣಿಸಿ, ಮಾನವೀಯ ದೃಷ್ಟಿಯಿಂದ ನಂತರ ಪರೀಕ್ಷೆ ಬರೆಯಲು ಅವಕಾಶ ಕೊಡಲಾಯಿತು. ಆದರೆ ಅವರಿಗೆ ಪ್ರತ್ಯೇಕ ನೋಂದಣಿ ಸಂಖ್ಯೆಯನ್ನು ನೀಡಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next