Advertisement

ಈ ವರ್ಷವೇ ಸಿಇಟಿ ಆನ್‌ಲೈನ್‌ ಪರೀಕ್ಷೆ?

12:30 AM Jan 27, 2019 | |

ಬೆಂಗಳೂರು: ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರಸಕ್ತ ಸಾಲಿನಿಂದಲೇ ಆನ್‌ಲೈನ್‌ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಂಭೀರ ಚಿಂತನೆ ನಡೆಸುತ್ತಿದೆ.

Advertisement

ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌ ಹಾಗೂ ಆರ್ಕಿಟೆಕ್ಚರ್‌ ಕೋರ್ಸ್‌ಗಳನ್ನು ಹೊರತುಪಡಿಸಿ ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್‌ ತಿಂಗಳಲ್ಲಿ ಇದು ನಡೆಯಲಿದೆ. ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಏ.23ರಿಂದ 25ರವರೆಗೆ ನಡೆಯಲಿದೆ.

ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷಾ ವಿಧಾನಗಳು ಬದಲಾಗುತ್ತಿವೆ. ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುವುದರಿಂದ ಪರೀಕ್ಷಾ ಅವ್ಯವಹಾರ ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬಹುದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆನ್‌ಲೈನ್‌ ಮೂಲಕ ಸಿಇಟಿ ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದೆ. ಈ ಸಂಬಂಧ ಪ್ರಸಕ್ತ ಸಾಲಿನಿಂದಲೇ ಆನ್‌ಲೈನ್‌ ಮೂಲಕ ಸಿಇಟಿ ನಡೆಸಬಹುದೇ ಎಂಬುದನ್ನು ಪರಿಶೀಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಸರ್ಕಾರದಿಂದ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗಲೇ ಮೂರು ಸಭೆ: ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಸೌಲಭ್ಯದ ಅಗತ್ಯವಿದೆ ಹಾಗೂ ವಿದ್ಯಾರ್ಥಿಗಳನ್ನು ಇದಕ್ಕೆ ಸಜ್ಜುಗೊಳಿಸಬೇಕಿದೆ. ಪ್ರಸಕ್ತ ಸಾಲಿನಿಂದ ಆನ್‌ಲೈನ್‌ನಲ್ಲಿ ಪರೀಕ್ಷೆ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಮೂರು ಸಭೆ ಕೂಡ ನಡೆದಿವೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಆನ್‌ಲೈನ್‌ ಮೂಲಕ ಸಿಇಟಿ ನೋಂದಣಿಗೆ ಮೊಬೈಲ್‌ ಬಳಕೆ ಸೇರಿದಂತೆ ಹೊಸ ಬದಲಾವಣೆಗಳ ಹತ್ತಾರು ವಿಷಯದ ಚರ್ಚೆ ಮತ್ತು ನಿರ್ಣ ಯಕ್ಕಾಗಿ ಅತಿ ಶೀಘ್ರದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯ ತೀರ್ಮಾನದಂತೆ ಆನ್‌ಲೈನ್‌ ಮೂಲಕ ಸಿಇಟಿ ಪರೀಕ್ಷೆ ನಡೆಯುತ್ತದೋ ಅಥವಾ ಇಲ್ಲವೋ ಎಂಬುದು ಖಚಿತವಾಗಲಿದೆ ಎಂದು ವಿವರಿಸಿದರು.

Advertisement

2019-20ನೇ ಸಾಲಿನಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಮೊದಲ ವರ್ಷದ ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ ಕೋರ್ಸ್‌ಗಳಾದ ಬಿವಿಎಸ್‌ಸಿ ಮತ್ತು ಎ ಎಚ್, ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಬಿ.ಎಸ್ಸಿ (ಹಾನರ್) ಕೃಷಿ, ಅರಣ್ಯ ವಿಜ್ಞಾನ, ರೇಷ್ಮೆ ಕೃಷಿ, ತೋಟಗಾರಿಕೆ, ಜೈವಿಕ ಕೃಷಿ ತಂತ್ರಜ್ಞಾನ, ಸಮುದಾಯ ವಿಜ್ಞಾನ, ಬಿ.ಟೆಕ್‌ ಕೋರ್ಸ್‌ಗಳಾದ ಕೃಷಿ ಎಂಜಿನಿಯರಿಂಗ್‌, ಬಯೋಟೆಕ್ನಾಲಜಿ, ಹೈನುಗಾರಿಕೆ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಬಿಎಫ್ಎಸ್‌ಸಿ
(ಮೀನುಗಾರಿಕೆ) ಬಿ.ಎಸ್ಸಿ ಕೃಷಿ ಮಾರುಕಟ್ಟೆ ಮತ್ತು ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಹಾಗೂ ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.

ಆಯುಷ್‌ಗೂ ನೀಟ್ ಕಡ್ಡಾಯ: ವೈದ್ಯಕೀಯ, ದಂತವೈದ್ಯ ಕೀಯ ಹಾಗೂ ಭಾರತೀಯ ವೈದ್ಯ ಪದ್ಧತಿಯ ಆಯುಷ್‌ ಕೋರ್ಸ್‌ಗಳಾದ ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಮತ್ತು ಹೋಮಿಯೋಪಥಿ ಕೋರ್ಸ್‌ ಗಳಿಗೆ ಸರ್ಕಾರಿ ಕೋಟಾದಡಿ ಸೀಟು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಿಬಿಎಸ್‌ಸಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)-2019ರಲ್ಲಿ ಹಾಜ ರಾಗಿ ಉತ್ತಮ ರ್‍ಯಾಂಕ್‌ ಪಡೆಯಬೇಕಾಗುತ್ತದೆ. ಕಳೆದ ವರ್ಷ ದಿಂದ ಆಯುಷ್‌ಗೂ ನೀಟ್ ಕಡ್ಡಾಯ ಮಾಡಲಾಗಿದೆ. ಇನ್ನು ಆರ್ಕಿಟೆಕ್ಚರ್‌(ವಾಸ್ತುಶಿಲ್ಪ) ಕೋರ್ಸ್‌ನ ಪ್ರವೇಶಕ್ಕೆ ಅಭ್ಯರ್ಥಿ ಗಳು ಜೆಇಇ ಪೇಪರ್‌-2 ಅಥವಾ ಆರ್ಕಿಟೆಕ್ಚರ್‌ ಪರಿಷತ್‌ ನಡೆಸುವ ನ್ಯಾಷನಲ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌(ಎನ್‌ಎಟಿಎ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.

ಯೂಟರ್ನ್ ಹೊಡೆದಿದ್ದ ಸಚಿವ
ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟು ಹಂಚಿಕೆಗೆ ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆ ನಡೆಸಲಿದ್ದೇವೆ ಎಂದು ಹೇಳಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಮಾರನೇ ದಿನ ಇದಕ್ಕೆ ಸ್ಪಷ್ಟೀಕರಣ ನೀಡಿ, ಪ್ರಸಕ್ತ ಸಾಲಿನ ಪರೀಕ್ಷೆ ಆನ್‌ಲೈನ್‌ನಲ್ಲಿ ನಡೆಸುವುದಿಲ್ಲ, ಮುಂದಿನ ವರ್ಷಗಳಲ್ಲಿ ಆನ್‌ಲೈನ್‌ ಮೂಲಕ ನಡೆಸುವ ಆಲೋಚನೆ ಇದೆ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಅಧಿಕೃತ ಸೂಚನೆ ರವಾನೆ ಮಾಡಿರುವ ಸರ್ಕಾರ, ಪ್ರಸಕ್ತ ಸಾಲಿನಲ್ಲೇ ಆನ್‌ಲೈನ್‌ ಪರೀಕ್ಷೆ ನಡೆಸಬಹುದೇ ಎಂಬುದರ ಸಾಧಕ ಬಾಧಕ ತಿಳಿಸುವಂತೆ ಸೂಚಿಸಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next