ಮಣಿಪಾಲ: ಅವಕಾಶಗಳು ಪದೇಪದೆ ಬರುವುದಿಲ್ಲ. ಸಿಕ್ಕಾಗ ಸದುಪಯೋಗ ಮಾಡಿಕೊಳ್ಳಬೇಕು. ಸಾಧಕರು ಒಂದೇ ದಿನದಲ್ಲಿ ಸೃಷ್ಟಿಯಾಗುವುದಿಲ್ಲ. ಸತತ ಕಠಿನ ಪರಿಶ್ರಮದಿಂದ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿ.ಪಂ., ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಾಹೆ ವಿ.ವಿ.ಯ ಎಂಐಟಿ ಆಶ್ರಯ ದಲ್ಲಿ ನಡೆಯಲಿರುವ ಸರಕಾರಿ ಪ.ಪೂ. ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಆನ್‌ಲೈನ್ ತರಬೇತಿಗೆ ಸೋಮವಾರ ಜಿ.ಪಂ. ತರಬೇತಿ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮ ದಿಂದ ಮಾತ್ರ ಮೇಲೆ ಬರಲು ಸಾಧ್ಯ. ಸಾಧನೆ ಮಾಡಿದಾಗ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಜಿ.ಪಂ.ನಿಂದ ಒದಗಿಸುತ್ತಿರುವ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಜಿಲ್ಲಾ ಸಿಇಒ ಎಚ್.ಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಉಪ ವಿಭಾಗಧಿಕಾರಿ ರಶ್ಮಿ, ಡಿಡಿಪಿಐ ಕೆ. ಗಣಪತಿ, ಡಿಡಿಪಿಯು ಮಾರುತಿ, ಜಿ.ಪಂ. ಮುಖ್ಯಯೋಜನಾಧಿಕಾರಿ ಶ್ರೀನಿವಾಸ ರಾವ್, ಎಂಐಟಿ ಪ್ರಾಧ್ಯಾಪಕ ಡಾ| ಬಾಲಕೃಷ್ಣ ಮಧ್ದೋಡಿ ಉಪಸ್ಥಿತರಿದ್ದರು.
ಜಿಲ್ಲೆಯ 1 ವಸತಿ ಶಾಲೆ ಸಹಿತ 29 ಸರಕಾರಿ ಪ.ಪೂ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರತಿದಿನ ಮಧ್ಯಾಹ್ನ ಆನ್‌ಲೈನ್ ಮೂಲಕ ಸಿಇಟಿ, ನೀಟ್, ಜೆಇಇ ಆನ್‌ಲೈನ್ ತರಬೇತಿಯನ್ನು ವಿಷಯ ತಜ್ಞರ ಮೂಲಕ ನೀಡಲಾಗುತ್ತದೆ. ಇದಕ್ಕಾಗಿ ಕಾಲೇಜುಗಳಿಗೆ ಈಗಾಗಲೇ ಮಾನಿಟರ್, ಲ್ಯಾಪ್‌ಟಾಪ್ ಹಾಗೂ ಪ್ರಾಜೆಕ್ಟರ್ ಒದಗಿಸಲಾಗಿದೆ. 1,280 ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯಲಿದ್ದಾರೆ. 140 ಗಂಟೆ ತರಬೇತಿ ಇರಲಿದೆ. 80 ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯದ ತರಬೇತಿ ನೀಡಲಾಗುತ್ತದೆ. 2022-23ನೇ ಸಾಲಿನಿಂದಲೇ ಇದು ಆರಂಭವಾಗಿದ್ದು, ಕಳೆದ ವರ್ಷ 28 ಕಾಲೇಜುಗಳ 1,350 ವಿದ್ಯಾರ್ಥಿಗಳು ಅನುಕೂಲ ಪಡೆದಿದ್ದರು.
ವೀಡಿಯೋ ಪ್ರಕರಣ: ನಿಷ್ಪಕ್ಷ ತನಿಖೆ ಭರವಸೆ
ಉಡುಪಿ: ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಯಾರಿಗೂ ಅನ್ಯಾಯವಾ ಗದಂತೆ ನಿಷ್ಪಕ್ಷವಾಗಿ ತನಿಖೆ ನಡೆಯಲಿದೆ ಎಂದು ಸಚಿವೆ ಲಕ್ಷ್ಮೀ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಯಶ್‌ಪಾಲ್ ಸುವರ್ಣ ನನ್ನ ಸಹೋದರನಿದ್ದಂತೆ. ವಿಪಕ್ಷದಲ್ಲಿರುವ ಕಾರಣ ಸಿಐಡಿ ತನಿಖೆಯಲ್ಲಿ ವಿಶ್ವಾಸ ಇಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತನಿಖೆ ನಡೆಸಲಾ ಗುವುದು ಎಂದರು.
ಮಣಿಪಾಲದ ಪಬ್‌ಗಳಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾರನ್ನೂ ಗುರಿ ಮಾಡಿ ದಾಳಿ ನಡೆಸುತ್ತಿಲ್ಲ. ಪಬ್, ಹೊಟೇಲ್‌ಗಳ ಮೇಲೆ ದಾಳಿ ನಡೆಸಿದರೆ ಬಿಜೆಪಿ ಯವರು ಹೇಗೆ ಗುರಿ ಆಗುತ್ತಾರೆ ಎಂದು ಪ್ರಶ್ನಿಸಿದರು.