ಬೆಂಗಳೂರು: ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆದ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಯನ್ನು ಏಕಕಾಲದಲ್ಲಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹೊರತು ಪಡಿಸಿ ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟಿಗೆ ಪ್ರಾಧಿಕಾರವು ಈಗಾಗಲೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿದೆ. ಏಪ್ರಿಲ್ 18 ಮತ್ತು 19ರಂದು ಸಿಇಟಿ ಪರೀಕ್ಷೆ ನಡೆದಿದೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟಿಗೂ ಮೇ 6ರಂದು ನೀಟ್ ನಡೆದಿದೆ.
ಫಲಿತಾಂಶವನ್ನು ಮೇ ಅಂತ್ಯದಲ್ಲಿ ನೀಡಲು ನಿರ್ಧರಿಸಲಾಗಿದೆ. ಕಾರಣ, ನೀಟ್ ಫಲಿತಾಂಶ ಹೊರಬೀಳಲು ಇನ್ನಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂಬ ಸದುದ್ದೇಶದಿಂದ ನೀಟ್ ತೇರ್ಗಡೆಯಾದ ವಿದ್ಯಾರ್ಥಿಗಳ ಹಾಗೂ ಸಿಇಟಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಯನ್ನು ಒಟ್ಟೊಟ್ಟಿಗೆ ಮಾಡಲಾಗುತ್ತದೆ.
2017ರಲ್ಲಿ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಗಳು ನೀಟ್ ಬರೆದಿದ್ದರು. ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿದ್ಯಾರ್ಥಿಗಳು ಹೀಗೆ ಮೂರು ವಿಧದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿತ್ತು.
ಇದರಿಂದ ಹಲವು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಎರಡೆರೆಡು ಬಾರಿ ದಾಖಲೆ ಪರಿಶೀಲನೆ ಮಾಡಿಕೊಳ್ಳಬೇಕೇ ಎಂಬ ಜಿಜ್ಞಾಸೆಯೂ ಮೂಡಿತ್ತು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ಗೊಂದಲ ಆಗಬಾರದು ಎಂಬ ಕಾರಣಕ್ಕಾಗಿ ಏಕಕಾಲದಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ನೀಟ್ ತೇರ್ಗಡೆಯಾಗಿ ದಾಖಲೆ ಪರಿಶೀಲನೆ ಮಾಡಿಕೊಂಡ ವಿದ್ಯಾರ್ಥಿ,ಸಿಇಟಿಗೆ ಪ್ರತ್ಯೇಕವಾಗಿ ದಾಖಲೆ ಪರಿಶೀಲನೆ
ಮಾಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ, ಅಲ್ಪಸಂಖ್ಯಾತ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಆ ಕೋಟಾದಡಿ ಸೀಟು ಪಡೆಯಲು ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ.
ಸಿಇಟಿ ಫಲಿತಾಂಶವನ್ನು ಮೇ ಅಂತ್ಯಕ್ಕೆ ನೀಡಲಿದ್ದೇವೆ. ನೀಟ್ ಫಲಿತಾಂಶ ಬಂದ ನಂತರ ಸಿಇಟಿ ವಿದ್ಯಾರ್ಥಿಗಳ ಜತೆಗೆ ದಾಖಲೆ ಪರಿಶೀಲನೆ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು
ಅನುಕೂಲವಾಗಲಿದೆ.
– ಗಂಗಾಧರಯ್ಯ,
ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ