Advertisement

16, 17ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆ; ಅಕ್ರಮ ತಡೆಗೆ ಹಲವು ಕ್ರಮಗಳು

01:39 PM Jun 15, 2022 | Team Udayavani |

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಇದೇ 16 ಮತ್ತು 17ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಿಇಟಿ ವಿವರಗಳನ್ನು ಪ್ರಕಟಿಸಿದ ಅವರು, `16ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿದೆ’ ಎಂದರು.

18ರ ಬೆಳಿಗ್ಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಬೆಂಗಳೂರು, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರುಗಳಲ್ಲಿ ಕನ್ನಡ ಭಾಷಾಪರೀಕ್ಷೆ ನಡೆಯಲಿದ್ದು, ಈ ಸಲ 1,708 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅವರು, ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮ ಮತ್ತು ಅವರಿಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆಯೂ ಮಾಹಿತಿ ನೀಡಿದರು.

ಈ ಬಾರಿ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 87 ಕೇಂದ್ರಗಳು ಬೆಂಗಳೂರಿನಲ್ಲಿವೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಈ ಬಾರಿ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನೂ ಸಮಗ್ರವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಜತೆಗೆ ಪ್ರಶ್ನೆಪತ್ರಿಕೆ ಪೂರೈಕೆ ಇತ್ಯಾದಿಗಳನ್ನು ಹದ್ದಿನ ಕಣ್ಣಿನ ಪಹರೆಯಲ್ಲಿ ನಡೆಸಲಾಗುವುದು’ ಎಂದರು.

ಈ ಸಲದ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಮತ್ತು ಉತ್ತರಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

Advertisement

ಪ್ರತಿಯೊಂದು ಕೇಂದ್ರಕ್ಕೂ ಸಹಾಯಕ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರನ್ನು ಪರೀಕ್ಷಾ ವೀಕ್ಷಕರಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ, 486 ವೀಕ್ಷಕರು, 972 ವಿಶೇಷ ತಪಾಸಣಾ ದಳದ ಸದಸ್ಯರು, 486 ಪ್ರಶ್ನೆಪತ್ರಿಕೆ ಪಾಲಕರು, 9,600 ಕೊಠಡಿ ಮೇಲ್ವಿಚಾರಕರು ಮತ್ತು 20 ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಸಿಇಟಿ ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ . ರಮ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕಟ್ಟುನಿಟ್ಟು ನಿರ್ಬಂಧಗಳು

ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಅವುಗಳನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದರು. ಈ ನಿರ್ಬಂಧಗಳು ಕೆಳಕಂಡಂತಿವೆ-

· ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು

· ಓಎಂಆರ್ ಉತ್ತರ ಪತ್ರಿಕೆಯಲ್ಲಿ ತಮ್ಮ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಶನ್ ಕೋಡ್ ನಮೂದಿಸಬೇಕು.

· ಮೊದಲ ಗಂಟೆ ಬಾರಿಸಲಿರುವ ನಿಗದಿತ ಅವಧಿಗಿಂತಲೂ ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

· ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ (ಅಡ್ಮಿಶನ್ ಟಿಕೆಟ್) ಮತ್ತು ಯಾವುದಾದರೂ ಒಂದು ಸೂಕ್ತ ಗುರುತಿನ ಪತ್ರವನ್ನು ತರಬೇಕು (ಕಾಲೇಜಿನ ಗುರುತುಪತ್ರ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಆಧಾರ್/ಪ್ಯಾನ್ ಕಾರ್ಡ್, ದ್ವಿತೀಯ ಪಿಯುಸಿ/12ನೇ ತರಗತಿಯ ಪ್ರವೇಶ ಪತ್ರ ಇತ್ಯಾದಿಗಳ ಪೈಕಿ ಒಂದು).

· ಯಾವುದೇ ತರಹದ ಕೈಗಡಿಯಾರಗಳನ್ನು ಕಟ್ಟಿಕೊಂಡು ಬರುವಂತಿಲ್ಲ.

· ಟ್ಯಾಬ್, ಮೊಬೈಲ್, ಕ್ಯಾಲ್ಕುಲೇಟರುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next