Advertisement

ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಸುಖಾಂತ್ಯ : ಡಿಸಿಎಂ ಅಶ್ವಥನಾರಾಯಣ

10:46 PM Jul 31, 2020 | sudhir |

ಬೆಂಗಳೂರು: ಎರಡನೇ ದಿನವೂ ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಒಂದು ಸಣ್ಣ ಸಮಸ್ಯೆ ಹಾಗೂ ಲೋಪದೋಷವೂ ಇಲ್ಲದೆ ಸಮಾಪ್ತಿಯಾಗಿದೆ. ಕೋವಿಡ್ ಪಾಸಿಟೀವ್ ಇದ್ದ 63 ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದಾರೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

Advertisement

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಆನ್’ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 1,94,419 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಭೌತವಿಜ್ಞಾನ ಕ್ಕೆ 1,75,4428 ವಿದ್ಯಾರ್ಥಿಗಳು ಹಾಜರಾಗಿದ್ದರು. ಶೇ. 90.23ರಷ್ಟು ಹಾಜರಾತಿ ಇತ್ತು. ರಸಾಯನವಿಜ್ಞಾನ ದಲ್ಲಿ 1,75,337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 90.9ರಷ್ಟು ಹಾಜರಾತಿ ಆಗಿದೆ. ಇನ್ನು 2019ರಲ್ಲಿ ಭೌತವಿಜ್ಞಾನದಲ್ಲಿ ಶೇ. 92.27 ಹಾಗೂ ರಸಾಯನವಿಜ್ಞಾನ ದಲ್ಲಿ ಶೇ.90.88 ಹಾಜರಾತಿ ಇತ್ತು. ಕೋವಿಡ್ ಆತಂಕದ ನಡುವೆಯೂ ಈ ವರ್ಷ ಅತ್ಯುತ್ತಮ ಹಾಜರಾತಿ ಇದೆ. ಸೋಂಕಿನ ಭಯವಿದ್ದರೂ ಆತ್ಮಸ್ಥೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಸರಕಾರದ ಪರವಾಗಿ ಎಲ್ಲ ವಿದ್ಯಾರ್ಥಿಗಳು, ಪೋಷಕರಿಗೆ ಕೃತಜ್ಞತೆಗಳು ಎಂದು ಡಿಸಿಎಂ ಹೇಳಿದರು.

6 ಕೇಂದ್ರಗಳಲ್ಲಿ ಗಡಿ ಕನ್ನಡಿಗರಿಗೆ ಪರೀಕ್ಷೆ:

ಶನಿವಾರ ಹೊರನಾಡು ಮತ್ತು ಗಡಿ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಮಂಗಳೂರು, ಬೆಂಗಳೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಬೀದರ್ ಜಿಲ್ಲಾ ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅದಕ್ಕೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಹೆಲ್ಪ್’ಲೈನ್ ನೆರವು:

Advertisement

ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ. ಸಿಇಟಿ ಹೆಲ್ಪ್’ಲೈನ್’ಗೆ ಗುರುವಾರ 200ಕ್ಕೂ ಹೆಚ್ಚು ಕರೆಗಳು ಬಂದಿದ್ದವು. ಅದರಲ್ಲಿ 10ರಿಂದ 15 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮನವಿ ಮಾಡಿದರು. ಪರೀಕ್ಷಾ ಪ್ರಾಧಿಕಾರ ಅವರಿಗೆ ನೆರವಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳು ಅಪ್ಲಿಕೇಷನ್ ಸಂಖ್ಯೆ ಮತ್ತು ಯೂಸರ್ ಐಡಿ ಮತ್ತಿತರ ಸಮಸ್ಯೆ ಗಳಿಗೆ ಕರೆ ಮಾಡಿದ್ದು ಅವರಿಗೂ ಪ್ರವೇಶ ಪತ್ರ ಡೌನ್’ಲೋಡ್ ಮಾಡಿಕೊಳ್ಳಲು ಸಹಾಯ ಮಾಡಲಾಗಿದೆ. ಇನ್ನು ಅನೇಕ ಕಡೆ ಮಾಸ್ಕ್ ಇಲ್ಲದೆ ಬಂದವರಿಗೆ ಮಾಸ್ಕ್ ನೀಡಲಾಗಿದೆ. ಉಳಿದಂತೆ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿತ್ತು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಇಡೀ ತಂಡಕ್ಕೆ ಕೃತಜ್ಙತೆ:

ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಶಿಕ್ಷಣ, ಬಿಬಿಎಂಪಿ, ಕೆಸ್ಸಾರ್ಟಿಸಿ, ಬಿಎಂಟಿಸಿ, ಆರೋಗ್ಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಎಲ್ಲ ಸಿಬ್ಬಂದಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಅವರಿಗೆ ಅಭಿವಂದನೆ ಸಲ್ಲಿಸಲಿದ್ದೇನೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

20 ದಿನದಲ್ಲಿ ಫಲಿತಾಂಶ:

ಇನ್ನು 15ರಿಂದ 20 ದಿನಗಳ ಒಳಗಾಗಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಈ ವರ್ಷ ಕೌನ್ಸೆಲಿಂಗ್ ಸೇರಿದಂತೆ ಎಲ್ಲವನ್ನೂ ಆನ್’ಲೈನ್’ನಲ್ಲಿಯೇ ಮಾಡಲಾಗುವುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next