Advertisement

ರಾಜ್ಯಾದ್ಯಂತ ಮೊದಲ ದಿನದ ಸಿಇಟಿ ಸುಸೂತ್ರ

08:52 PM Jun 16, 2022 | Team Udayavani |

ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ರಾಜ್ಯಾದ್ಯಂತ ಗುರುವಾರ ಆರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಶಸ್ವಿಯಾಗಿ ನಡೆದಿದ್ದು, ಶೇ.96ರಷ್ಟು ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.

Advertisement

ಒಟ್ಟಾರೆ 2,16,559 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಜೀವಶಾಸ್ತ್ರಕ್ಕೆ 1,75,309 (ಶೇ.80.9) ಹಾಗೂ ಗಣಿತ ವಿಷಯಕ್ಕೆ 2,08,032 (ಶೇ.96.06) ಅಭ್ಯರ್ಥಿಗಳು ಹಾಜರಾಗಿದ್ದಾರೆ. ರಾಜ್ಯದ ಯಾವುದೇ ಕೇಂದ್ರಗಳಲ್ಲಿ ಎಲ್ಲಿಯೂ ಪರೀಕ್ಷಾ ಅಕ್ರಮ, ನಕಲು ಅಥವಾ ಗೊಂದಲಗಳು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ತಡವಾಗಿ ಬಂದು ಅವಕಾಶ ವಂಚಿತ:

ಸಿಇಟಿ ಪರೀಕ್ಷಾ ಭದ್ರತೆಯನ್ನು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್‌. ರಮ್ಯಾ ಅವರು ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಕಾಲೇಜು ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರ್ದೇಶಕರು ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಪರೀಕ್ಷೆಗೆ ಅರ್ಧಗಂಟೆ ತಡವಾಗಿ ಬಂದಂತಹ ವಿದ್ಯಾರ್ಥಿನಿಯೊಬ್ಬರಿಗೆ ಅವಕಾಶ ನೀಡದೆ ವಾಪಸ್‌ ಕಳುಹಿಸಿದ ಘಟನೆ ಜರುಗಿತು. ನಿಗದಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗಬೇಕು ಎಂಬ ನಿಯಮವಿದೆ. ಅರ್ಧಗಂಟೆ ತಡವಾಗಿ ಬಂದರೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

Advertisement

ರಾಜ್ಯಾದ್ಯಂತ ನಿಗದಿತ ಸಮಯದಲ್ಲಿಯೇ ಪರೀಕ್ಷೆ ಆರಂಭವಾಗಿ ಯಶಸ್ವಿಯಾಗಿ ನಡೆದಿದೆ. ವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ಪಾಲನೆ ಮಾಡಿದ್ದಾರೆ. ಕೆಲವರು ತಾಂತ್ರಿಕ ಸಮಸ್ಯೆಯಿಂದ ಪ್ರವೇಶಪತ್ರ ಸಿಕ್ಕಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಎರಡು ತಿಂಗಳ ಕಾಲ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದೇವು. ಜೂ.13ರ ವರೆಗೂ ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಸಮಯ ನೀಡಲಾಗಿತ್ತು. ತಾಂತ್ರಿಕ ಸಮಸ್ಯೆ ಉಂಟಾಗಿದ್ದ ವಿದ್ಯಾರ್ಥಿಗಳಿಗೆ ಕೆಇಎ ವತಿಯಿಂದ ಸರಿಪಡಿಸಲಾಗಿದೆ. ಎಲ್ಲಿಯೂ ಸರ್ವರ್‌ ಸಮಸ್ಯೆ ಉಂಟಾಗಿಲ್ಲ ಎಂದು ನಿರ್ದೇಶಕರು ಪ್ರತಿಕ್ರಿಯಿಸಿದರು.

ಇದೇ ರೀತಿ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಬುರ್ಖಾ ಮತ್ತು ಹಿಜಾಬ್‌ ಧರಿಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು. ಇದಕ್ಕೆ ಅವಕಾಶ ನೀಡದ ಪರೀಕ್ಷಾ ಸಿಬ್ಬಂದಿ, ಹಿಜಾಬ್‌ ಮತ್ತು ಬುರ್ಖಾ ತೆಗೆಸಿ ನಂತರ ಅವಕಾಶ ನೀಡಲಾಗಿದೆ. ಆದರೆ, ಪರೀಕ್ಷೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಬೆಂ.ಉತ್ತರ ಜಿಲ್ಲೆಯ ಡಿಡಿಪಿಯು ಶ್ರೀರಾಮ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next