ಬೆಂಗಳೂರು: ಸಿಇಟಿ-2024ರಲ್ಲಿ ಕೇಳಿದ್ದ ಪಠ್ಯೇತರ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಹಾಗೆಯೇ ಮರು ಪರೀಕ್ಷೆ ನಡೆಸುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.ಎ. 18 ಮತ್ತು 19ರಂದು ನಡೆದಿದ್ದ ಸಿಇಟಿ- 2024ರಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿರು ವುದು ಪರೀಕ್ಷೆ ಬರೆದಿದ್ದ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ, ಪ್ರತಿಭಟನೆ ನಡೆದ ಬಳಿಕ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆಯು ವಿಷಯವಾರು ತಜ್ಞರಿಂದ ವರದಿ ಪಡೆದಿತ್ತು. ಈಗ ವರದಿಯ ಆಧಾರದಲ್ಲಿ ಪಠ್ಯೇತರ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ ನಡೆಸಲು ತೀರ್ಮಾನಿಸಲಾಗಿದೆ.
ಭೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 15, ಗಣಿತದಲ್ಲಿ 15 ಮತ್ತು ಜೀವಶಾಸ್ತ್ರದಲ್ಲಿ 11 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬುದನ್ನು ತಜ್ಞರ ವರದಿ ದೃಢಪಡಿಸಿದ್ದು, ಈ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈ ಬಿಡಲಾಗುತ್ತದೆ. ಇದರ ಜತೆಗೆ ಎರಡು ತಪ್ಪು ಪ್ರಶ್ನೆಗಳಿದ್ದು, ಅವಕ್ಕೆ ಕೃಪಾಂಕ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕೀ ಉತ್ತರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಮೌಲ್ಯಮಾಪನದಿಂದ ಹೊರಗಿಡುವ ಪಠ್ಯೇತರ ಪ್ರಶ್ನೆಗಳ ಪಟ್ಟಿಯನ್ನು ನೀಡಲಿದೆ.
ಈ ಪಟ್ಟಿಯಲ್ಲಿರುವ ಪ್ರಶ್ನೆಗಳನ್ನು ಹೊರತುಪಡಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳ ಹಿತ ರಕ್ಷಣೆಯ ಜತೆಗೆ ಸಮಾನ ಅವಕಾಶವನ್ನು ಸೃಷ್ಟಿಸಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ. ಎಸ್. ತಿಳಿಸಿದ್ದಾರೆ. ವೇಳಾಪಟ್ಟಿಯಂತೆ ಮೇ ಕೊನೆಯ ವಾರ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಿಸುವುದಾಗಿ ಭರವಸೆ ನೀಡಲಾಗಿದೆ. ಒಟ್ಟು 50 ಪ್ರಶ್ನೆಗಳನ್ನು ಕೈಬಿಡುತ್ತಿರುವ ಹಿನ್ನೆಲೆಯಲ್ಲಿ 190 ಅಂಕಗಳಿಗೆ ಸೀಮಿತವಾಗಿ ಮೌಲ್ಯಮಾಪನ ನಡೆಯಲಿದೆ.
ಇದರ ಜತೆಗೆ ಭವಿಷ್ಯದಲ್ಲಿ ಇಂತಹ ಎಡವಟ್ಟು ಘಟಿಸಬಾರದು ಎಂಬ ಕಾರಣಕ್ಕೆ ಸಿಇಟಿ ಪ್ರಶ್ನೆ ಪತ್ರಿಕೆಗಳ ರಚನೆಗೆ ಪ್ರಮಾಣೀಕೃತ ಕಾರ್ಯಾಚಾರಣ ವಿಧಾನವೊಂದನ್ನು ರೂಪಿಸುವಂತೆ ಕೆಇಎಗೆ ನಿರ್ದೇಶನ ನೀಡಲಾಗಿದೆ.