Advertisement
ಗರ್ಭಕೋಶ ಕಂಠದ ಪ್ರಪಂಚಾದ್ಯಂತ ಮಹಿಳೆಯರಲ್ಲಿ ಗರ್ಭಕೋಶದ ಕಂಠ (cervix) ದಲ್ಲಿ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತಿದೆ. 2020ರಲ್ಲಿ ಸುಮಾರು 6 ಲಕ್ಷಗಳಿಗಿಂತ ಹೆಚ್ಚು ಪ್ರಕರಣಗಳು ಹಾಗೂ ಸುಮಾರು 3.5 ಲಕ್ಷದಷ್ಟು ಸಾವುಗಳು ಈ ಕ್ಯಾನ್ಸರ್‌ನಿಂದ ಉಂಟಾಗಿವೆ. ಭಾರತದಲ್ಲಿ ಸುಮಾರು 1.25 ಲಕ್ಷ ಮಹಿಳೆಯರಲ್ಲಿ ಪ್ರತೀ ವರ್ಷ ಇದು ಕಂಡುಬರುತ್ತಿದ್ದು, ಇವರಲ್ಲಿ ಅರ್ಧದಷ್ಟು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಗರ್ಭಕೋಶದ ಕಂಠದಲ್ಲಿ ಉಂಟಾಗುವ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿ ಸರಳ ಪರೀಕ್ಷೆಗಳಿಂದ ಗುರುತಿಸಿ ಅಗತ್ಯ ಕ್ರಮ/ ಚಿಕಿತ್ಸೆ ನೀಡಿದರೆ ರೋಗ ಮುಂದುವರಿದು ಸಂಕೀರ್ಣಗೊಳ್ಳದಂತೆ ತಡೆಯಲು ಹಾಗೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಬಹಳಷ್ಟು ಮಹಿಳೆಯರು ಈ ಪರೀಕ್ಷೆಗಳು ನೋವಿನಿಂದ ಕೂಡಿವೆ, ರಕ್ತಸ್ರಾವಕ್ಕೆ ಕಾರಣವಾಗುತ್ತವೆ, ಪರೀಕ್ಷೆಗಾಗಿ ಗರ್ಭಾಶಯದ ತುಂಡನ್ನು ಸಂಗ್ರಹಿಸಲಾಗುತ್ತದೆ ಇತ್ಯಾದಿ ತಪ್ಪುಗ್ರಹಿಕೆಗಳನ್ನು ಹೊಂದಿರುತ್ತಾರೆ.
Related Articles
Advertisement
ಆರಂಭ ಹಂತದಲ್ಲಿರುವ ಅಸಹಜ ಬೆಳವಣಿಗೆ ಸಮಯದಲ್ಲಿ (ಮೊದಲ 10-15 ವರ್ಷ) ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ಆದರೆ ಈ ಸರಳ ಪರೀಕ್ಷೆಗಳಿಂದ ಈ ಸಮಯದಲ್ಲಿ ಅಸಹಜ ಬೆಳವಣಿಗೆಯಾಗುತ್ತಿರುವುದನ್ನು ಪತ್ತೆ ಮಾಡಬಹುದು. ಮುಂದುವರಿದ ಹಂತದಲ್ಲಿ ಇಂತಹ ಮಹಿಳೆಯರಲ್ಲಿ ರಕ್ತಸ್ರಾವವಾಗುವುದು, ವಾಸನೆಯಿಂದ ಕೂಡಿದ ಸ್ರಾವ, ಮಾಸಿಕ ಸ್ರಾವಗಳ ನಡುವೆ ರಕ್ತಸ್ರಾವ, ಕೆಳ ಹೊಟ್ಟೆ ನೋವುಗಳಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಗರ್ಭಕೋಶ ಕಂಠದ ಕ್ಯಾನ್ಸರ್‌ಗೆ ಅಪಾಯಕಾರಿ ಅಂಶಗಳು
ಇದು ಎಚ್.ಪಿ.ವಿ. ((Human papilloma virus) ಎಂಬ ವೈರಾಣುವಿನ ಸೋಂಕಿನಿಂದ ಹೆಚ್ಚಾಗಿ ಕಂಡುಬರುತ್ತದೆ. ಈ ವೈರಸ್‌ನಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಆದರೆ ಶೇ. 50ಕ್ಕಿಂತ ಹೆಚ್ಚಿನ ಗರ್ಭಕೋಶ ಕಂಠದ ಕ್ಯಾನ್ಸರ್‌ಗಳು ಎಚ್.ಪಿ.ವಿ.- 16 ಮತ್ತು ಎಚ್.ಪಿ.ವಿ.- 18 ಪ್ರಭೇದದ ವೈರಸ್‌ಗಳಿಂದ ಉಂಟಾಗುತ್ತವೆ.
ಕಿರಿಯ ವಯಸ್ಸಿನಲ್ಲಿ ಮದುವೆ ಹಾಗೂ ಅನೇಕ ಲೈಂಗಿಕ ಪಾಲುದಾರರನ್ನು ಹೊಂದಿರುವುದು
ದೀರ್ಘ ಕಾಲ ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದು
ಜನನಾಂಗದಲ್ಲಿ ಹರ್ಪಿಸ್ ಸೋಂಕಿರುವವರು, ಎಚ್.ಐ.ವಿ. ಸೋಂಕಿರುವವರು
ಅಸುರಕ್ಷಿತ ಲೈಂಗಿಕತೆ ಅಥವಾ ಕಳಪೆ ಲೈಂಗಿಕ ನೈರ್ಮಲ್ಯ
ಕ್ಯಾನ್ಸರ್ ಪತ್ತೆಗೆ ಮೊದಲ ಹಂತದ ಸರಳ ಪರೀಕ್ಷೆಗಳು
ಕ್ಯಾನ್ಸರ್ ಕಂಡುಬರುವ ಮಹಿಳೆಯರಲ್ಲಿ ಈ ಅಸಹಜ ಜೀವಕೋಶಗಳ ಅನಿಯಂತ್ರಣ ಬೆಳವಣಿಗೆ ಮೊದಲು 10-15 ವರ್ಷಗಳವರೆಗೆ ಅತೀ ನಿಧಾನವಾಗಿ ನಡೆಯುತ್ತಿರುವುದು. ಈ ಸಮಯದಲ್ಲಿ ಕೆಳಗಿನ ಅತ್ಯಂತ ಸರಳ, ನೋವಿಲ್ಲದ ಪರೀಕ್ಷೆಗಳಿಂದ ಈ ಅಸಹಜ ಬೆಳವಣಿಗೆ (pre-cancerous lesions) ಪತ್ತೆ ಮಾಡಿದರೆ ಅದು ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವುದನ್ನು ತಡೆಯಬಹುದು.
ಅಸಿಟಿಕ್ ಆಮ್ಲ ಬಳಸಿ ಬರೀಗಣ್ಣ ಪರೀಕ್ಷೆ
ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ವೈದ್ಯರು/ ದಾದಿಯರು ಮಾಡಬಹುದಾದ ಸರಳ ಪರೀಕ್ಷೆ. ಆಗ ತಾನೇ ತಯಾರಿಸಿದ ಶೇ. 3-5 ಅಸಿಟಿಕ್ ಆಮ್ಲವನ್ನು ಗರ್ಭಕಂಠಕ್ಕೆ ಲೇಪಿಸಲಾಗುತ್ತದೆ ಹಾಗೂ ಒಂದು ನಿಮಿಷದ ಅನಂತರ ಉತ್ತಮ ಬೆಳಕಿನಲ್ಲಿ ನೋಡಿದಾಗ ಅಲ್ಲಿ ಅಸಹಜ ಕೋಶಗಳು ಬಿಳಿ ಬಣ್ಣಕ್ಕೆ ತಿರುಗುವುದು ಕಂಡುಬರುತ್ತದೆ. ಈ ಹಂತದಲ್ಲಿ ಮಹಿಳೆಗೆ ಕ್ಯಾನ್ಸರ್ ರೋಗವಿದೆ ಎಂಬರ್ಥವಲ್ಲ ಮತ್ತು ಈ ಹಂತದಲ್ಲಿ ಅಸಹಜ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಮುಂದೆ ಕ್ಯಾನ್ಸರ್ ಆಗದಂತೆ ತಡೆಯಬಹುದು. ಇದು ಅತೀ ಸರಳವಾದ ಪರೀಕ್ಷೆ ಆಗಿದ್ದು, ಈ ಪರೀಕ್ಷೆಯಲ್ಲಿ ಅಸಹಜ ಬೆಳವಣಿಗೆ ಕಂಡುಬಾರದಿದ್ದಲ್ಲಿ ಪರೀಕ್ಷೆಯನ್ನು 3-5 ವರ್ಷಗಳ ಅನಂತರ ಪುನಃ ಮಾಡುವುದು.
ಪ್ಯಾಪ್ಸ್ ಪರೀಕ್ಷೆ
ಈ ಪರೀಕ್ಷೆಯಲ್ಲಿ ತರಬೇತಿ ಪಡೆದ ವೈದ್ಯರು/ ದಾದಿಯರು ಸ್ಪಾಟುಲಾ ಅಥವಾ ಬ್ರಷ್ ಅನ್ನು ಗರ್ಭಕಂಠದ ಮೇಲೆ ತಿರುಗಿಸುವ ಮೂಲಕ ಅಲ್ಲಿನ ಜೀವಕೋಶಗಳನ್ನು ಸಂಗ್ರಹಿಸಿ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಿ, ಅಸಹಜ ಜೀವಕೋಶಗಳನ್ನು ಪತ್ತೆ ಮಾಡುತ್ತಾರೆ. ಪ್ಯಾಪ್ಸ್ ಪರೀಕ್ಷೆಯಲ್ಲಿ ಅಸಹಜ ಜೀವಕೋಶಗಳು ಕಂಡುಬರದಿದ್ದರೆ ಪ್ರತೀ ಮೂರು ವರ್ಷಗಳಿಗೆ ಒಮ್ಮೆ ಪರೀಕ್ಷಿಸಲು ಸೂಚಿಸಲಾಗುವುದು. ಪರೀಕ್ಷೆಯಲ್ಲಿ ಅಸಹಜ ಜೀವಕೋಶಗಳು ಕಂಡುಬಂದಲ್ಲಿ ಈ Pre-cancerous/cancerous ಬೆಳವಣಿಗೆಯನ್ನು ದೃಢೀಕರಿಸಲು, ಕಾಲ್ಪಸ್ಕೊಪಿ ಬಯೋಪ್ಸಿ ಪರೀಕ್ಷೆಯನ್ನು ಹೆಚ್ಚಿನ ದೃಢೀಕರಣಕ್ಕಾಗಿ ಮಾಡಲಾಗುವುದು. ಈ ಹಂತದಲ್ಲಿ ಗರ್ಭಕೋಶ ಕಂಠದ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ದರಿಂದ 30ರಿಂದ 60 ವರ್ಷದವರೆಗಿನ ಮಹಿಳೆಯರು ಪ್ರತೀ 3 ರಿಂದ 5 ವರ್ಷಗಳಿಗೊಮ್ಮೆ ಈ ಪರೀಕ್ಷೆ ಮಾಡಿಸಿಕೊಂಡರೆ ಮುಂದೆ ಸಂಕೀರ್ಣಗೊಂಡ ಕ್ಯಾನ್ಸರ್‌ನ್ನು ಅನಂತರದ ಹಂತಗಳಲ್ಲಿ ಪತ್ತೆ ಆಗಿ ಚಿಕಿತ್ಸೆ ಅಥವಾ ಪ್ರಾಣ ಹಾನಿ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.
ಮೇಲೆ ಸೂಚಿಸಿದ ಗರ್ಭಕೋಶ ಕಂಠದ ಕ್ಯಾನ್ಸರ್ ನ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿದರೆ ಈ ಕ್ಯಾನ್ಸರ್ ಉಂಟಾಗುವುದನ್ನು ತಡೆಗಟ್ಟಬಹುದು ಅಲ್ಲದೆ ಎಚ್.ಪಿ.ವಿ. ವೈರಸ್‌ನಿಂದ ಉಂಟಾಗಬಹುದಾದ ಗರ್ಭಕೋಶ ಕಂಠದ ಕ್ಯಾನ್ಸರ್ ಅನ್ನು ಎಚ್.ಪಿ.ವಿ. ಸೋಂಕು ತಗಲುವ ಮೊದಲೇ ಲಸಿಕೆ ಪಡೆವುವುದರ ಮೂಲಕ ಕೂಡ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು.
-ಡಾ| ರಂಜಿತಾ ಎನ್. ಶೆಟ್ಟಿ ಸಹ ಪ್ರಾಧ್ಯಾಪಕರು, ಕಮ್ಯೂನಿಟಿ ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
-ಡಾ| ಅಶ್ವಿನಿ ಕುಮಾರ್ ಗೋಪಾಡಿ ಪ್ರೊಫೆಸರ್ ಮತ್ತು ಮುಖ್ಯಸ್ಥರು, ಕಮ್ಯೂನಿಟಿ ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒ.ಬಿ.ಜಿ. ವಿಭಾಗ ಮತ್ತು ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)