Advertisement

ಕೌಶಲ್ಯ ಕಾರ್ಮಿಕರಿಗೆ ಪ್ರಮಾಣ ಪತ್ರ ಕೊಡಿ

04:35 PM Feb 18, 2021 | Team Udayavani |

ಕಲಬುರಗಿ: ಮಹಾನಗರದಲ್ಲಿ ಯಾವುದೇ ಅಧಿಕೃತ ಪ್ರಮಾಣ ಪತ್ರವಿಲ್ಲದೇ ಪ್ಲಂಬರ್‌, ಎಲೆಕ್ಟ್ರಿಷಿಯನ್‌, ಟೈಲರಿಂಗ್‌, ಬ್ಯೂಟಿಶಿಯನ್‌ ಸೇರಿದಂತೆ ಅನೇಕ ಸ್ವಯಂ ಉದ್ಯೋಗ ಮಾಡುತ್ತಿರುವ ಕೌಶಲ್ಯಯುಕ್ತ ಕಾರ್ಮಿಕರನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಅಧಿಕೃತ ಪ್ರಮಾಣಪತ್ರ ವಿತರಿಸಬೇಕೆಂದು ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲಬುರಗಿಯಲ್ಲಿ ವಿಮಾನ ಸೇವೆ ಪ್ರಾರಂಭಗೊಂಡಿದ್ದರಿಂದ ವಾಯು ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ತೆರೆದಿವೆ. ಕೇಂದ್ರ ಸರ್ಕಾರದ ಪಿಎಂಕೆವಿವೈ, ರಾಜ್ಯ ಸರ್ಕಾರದ ಸಿಎಂಕೆಕೆವೈ ಯೋಜನೆಯಡಿ ಏರ್‌ಪೋರ್ಟ್‌, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯದ ಕೆಲಸಗಾರರಿಗೆ ಆಯಾ ಕ್ಷೇತ್ರಕ್ಕನುಗುಣವಾಗಿ ತರಬೇತಿ ನೀಡಿ ಅವರ ವೃತ್ತಪರತೆ ಹೆಚ್ಚಿಸುವ ಜವಾಬ್ದಾರಿ ಜಿಲ್ಲಾ ಕೌಶಲ್ಯ ಸಮಿತಿಯ ಉಪ ಸಮಿತಿಯದ್ದಾಗಿದೆ ಎಂದು ಹೇಳಿದರು.

ಆರ್ಥಿಕ ಪರಿಸ್ಥಿತಿಯಿಂದ ಬಡವರು ಶಿಕ್ಷಣ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಬಾಲಕಾರ್ಮಿಕ ಹಾಗೂ ಬಾಲ್ಯ ವಿವಾಹದಂತ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದ್ದು, ಇದಕ್ಕೆಲ್ಲ ಆರ್ಥಿಕತೆಯೇ ಮೂಲ ಕಾರಣ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಅವರ ಜೀವನೋಪಾಯಕ್ಕೆ ಸಹಾಯವಾಗುವಂತೆ ನೋಡಿಕೊಳ್ಳಬೇಕು ಎಂದರು.

ಮಕ್ಕಳಲ್ಲಿ ಕೈಗಾರಿಕೆ, ತಾಂತ್ರಿಕತೆ, ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಸ್ಥಳೀಯ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಫ್ಯೂಚರ್‌ ಆಫ್‌ ಸ್ಕಿಲ್‌ ಯೋಜನೆಯಡಿ ಪ್ರತಿ ವರ್ಷ 2.3 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದು, ಇದರ ಲಾಭ ಅರ್ಹ ಬಡ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸಮಿತಿಯ ಅಧಿ ಕಾರಿಗಳಿಗೆ ಸೂಚಿಸಿದರು.

Advertisement

ಸ್ಟೇಟ್‌ ಎಂಗೇಜ್ಮೆಂಟ್‌ ಅಧಿಕಾರಿ ಕ್ಯಾ. ಕೌಸ್ಟವ್‌ ನಾಥ್‌ ಮಾತನಾಡಿ, ಜಿಲ್ಲೆ ತೊಗರಿ ಉತ್ಪನ್ನಕ್ಕೆ ಹೆಸರು ವಾಸಿಯಾಗಿದ್ದು, ರೈತರೊಂದಿಗೆ ಚರ್ಚೆ ಮಾಡಿ ಕೃಷಿಯಲ್ಲಿ ಹೊಸ ಅನ್ವೇಷಣೆ ಮಾಡಲು ಉತ್ತೇಜಿಸುವ ಕೆಲಸವಾಗಬೇಕಿದೆ. ಕೈಗಾರಿಕೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಯುವಕರಿಗೆ ತರಬೇತಿ ನೀಡಬೇಕು. ಎಲ್ಲ ಕ್ಷೇತ್ರದಲ್ಲಿನ ಯುವಕರಿಗೆ ಸ್ಕಿಲ್‌ ಇಂಡಿಯಾ ಯೋಜನೆಯಡಿಯಲ್ಲಿ ಪರಿಪಕ್ವ ತರಬೇತಿ ನೀಡಿದಲ್ಲಿ ಸ್ಕಿಲ್‌ ಇಂಡಿಯಾ ಪರಿಕಲ್ಪನೆಯ ಯಶಸ್ಸು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಪಿಎಲ್‌ ಯೋಜನೆಯಡಿ ಜಿಲ್ಲೆಯಲ್ಲಿರುವ 400 ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ. ಮುಂದಿನ ಮೇ ತಿಂಗಳೊಳಗಾಗಿ ಸಂಪೂರ್ಣ ಕಾರ್ಯ ಯೋಜನೆ ಪೂರ್ಣಗೊಳ್ಳಲಿದೆ. ಹಳ್ಳಿ, ತಾಲೂಕು, ಪಟ್ಟಣಗಳಿಗೆ ಭೇಟಿ ನೀಡಿ ಸ್ಥಳೀಯರಿಗೆ ಅಗತ್ಯವಿರುವ ತರಬೇತಿ ನೀಡಿ
ಎಂದರು.

ಮಹಾತ್ಮ ಗಾಂಧಿ ನ್ಯಾಷನಲ್‌ ಫೆಲೋ ಮೇಘನಾ ಎಸ್‌. ಕುಮಾರ್‌, ಪಿಪಿಟಿ ಮೂಲಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಶ್‌ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರೊ| ನಾಗುಬಾಯಿ ಸೂರ್ಯವಂಶಿ, ಪ್ರಾದೇಶಿಕ ಸಂಯೋಜಕಿ ಸರ್ವಮಂಗಳ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next