ಬೆಂಗಳೂರು: “ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಅಗತ್ಯವಿದೆ’ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
2007 ರ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯಲ್ಲಿನ ದೋಷಗಳನ್ನು ಸರಿಪಡಿಸಿ, ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಹಾಗೂ ನಿರ್ವಹಣೆ ಮಾಡುವುದು, ಕುಂದು ಕೊರತೆ ನಿವಾರಣೆಗೆ ಸಮಿತಿ ಸ್ಥಾಪಿಸುವುದು, ಪ್ರತಿಯೊಂದು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಮತ್ತು ಆಸ್ಪತ್ರೆಯ ವೆಚ್ಚದ ದರವನ್ನು ನಿಗದಿಪಡಿಸುವುದು ಅತ್ಯವಶ್ಯಕವೆಂದು ಹೇಳಿದ್ದಾರೆ.
ಜಂಟಿ ಸದನ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರಿ ಆಸ್ಪತ್ರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿ ವೈದ್ಯಕೀಯ ಪ್ರಯೋಗಾಲಯ ಸ್ಥಾಪನೆಗೆ ಅವಕಾಶ ನೀಡದಿರುವುದು, ಖಾಸಗಿ ಆಸ್ಪತ್ರೆಗಳ ಕುಂದು ಕೊರತೆಗಳನ್ನು 45 ದಿನಗಳಲ್ಲಿ ನಿವಾರಿಸುವುದು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಚಿಕಿತ್ಸೆ ಮತ್ತು ಆಸ್ಪತ್ರೆಗಳ ವೆಚ್ಚದ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ತಿದ್ದುಪಡಿ ವಿಧೇಯಕದ ಕುರಿತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು ಸರಿಯಿಲ್ಲ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಉನ್ನತೀಕರಿಸಲು ಸರ್ಕಾರ ತೀರ್ಮಾನಿಸಿದೆ. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಔಷಧ ಮತ್ತು ಪ್ರಯೋಗಾಲಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ
ಉನ್ನತ ಸಮಿತಿ ಸಭೆ
ಆಸ್ಪತ್ರೆಗಳ ವೆಚ್ಚದ ದರ ನಿಗದಿ ಮಾಡಲು, ಖಾಸಗಿ, ಕಾರ್ಪೊರೇಟ್ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನಿಸುತ್ತದೆ. ಅಲ್ಲದೇ ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಿ ಖಾಸಗಿ ಸಂಸ್ಥೆಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ದರ ನಿಗದಿ ಮಾಡಲಾಗುತ್ತದೆ. ಹಾಲಿ ಇರುವ ಕಾಯ್ದೆಯ ಪ್ರಕಾರ ದಂಡದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಬಂಧನ ಮಾಡುವ ಬಗ್ಗೆಯೂ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.