Advertisement

ಇಂದಿರಾ ಕ್ಯಾಂಟೀನ್‌, ಬಿಸಿಯೂಟಕ್ಕೆ ಸಿರಿಧಾನ್ಯ: ಅಂತಾರಾಷ್ಟ್ರೀಯ ಮೇಳದಲ್ಲಿ ಸಿಎಂ ಘೋಷಣೆ

01:01 AM Jan 06, 2024 | Team Udayavani |

ಬೆಂಗಳೂರು : ಸಮಾಜದ ಪ್ರತಿಯೊಬ್ಬ ರಿಗೂ ಪೌಷ್ಟಿಕ ಆಹಾರ ನೀಡುವ ಗುರಿ ರಾಜ್ಯ ಸರಕಾರಕ್ಕಿದೆ. ಆದ್ದರಿಂದ ಅಂಗನವಾಡಿ, ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟೀನ್‌, ಪಡಿತರ ವಿತರಣೆಯಲ್ಲಿ ಶೀಘ್ರ ಸಿರಿಧಾನ್ಯ ಆಹಾರವನ್ನು ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮೂರು ದಿನಗಳ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ಪೌಷ್ಟಿಕಾಂಶಗಳನ್ನು ಸಿರಿಧಾನ್ಯಗಳು ಹೊಂದಿವೆ. ರಾಜ್ಯದ ಜನ ಮತ್ತು ಶಾಲಾಮಕ್ಕಳಿಗೆ ಇದು ದೊರೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳು, ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಪಡಿತರ, ಅಂಗನವಾಡಿ ಮತ್ತು ಶಾಲೆಗಳಲ್ಲಿ ವಿತರಿಸುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸಲಾಗುವುದು ಎಂದರು.

Advertisement

ಕೆಣಕಿದ ಶಾಸಕ; ಗದರಿದ ಸಚಿವೆ
ರಾಜ್ಯ ಸರಕಾರಕ್ಕೆ ಸಲಹೆಗಳನ್ನು ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು, “ಇಷ್ಟೆಲ್ಲ ಹೇಳುವ ನೀವು ಬರ ಪರಿಹಾರದ ಬಗ್ಗೆಯೂ ಸ್ವಲ್ಪ ಹೇಳಿ’ ಎಂದು ಶಾಸಕ ವಿನಯ ಕುಲಕರ್ಣಿ ಕೆಣಕಿದರು. ಇದಕ್ಕೆ ಪ್ರತಿಯಾಗಿ ಸಚಿವೆ, “ಇಲ್ಲಿ ರಾಜಕೀಯ ಮಾಡಲು ಬರಬೇಡಿ. ಹೋಗಿ ಕುಳಿತುಕೊಳ್ಳಿ’ ಎಂದು ಗದರಿದ ಪ್ರಸಂಗ ನಡೆಯಿತು.

ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿಗೆ ಆಹ್ವಾನ
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಎಲ್ಲ ಸಚಿವರಿಗೂ ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್‌ ಸಾಹಿ ಆಹ್ವಾನ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಸಿರಿಧಾನ್ಯ ಮೇಳ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೂರ್ಯಪ್ರತಾಪ್‌ ಸಾಹಿ ಅವರು, ಜ. 22ರಂದು ರಾಮ ಮಂದಿರ ಉದ್ಘಾಟನೆ ಆಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಹಿತ ಎಲ್ಲರೂ ಆಗಮಿಸುವ ಮೂಲಕ ಸಾಕ್ಷಿಯಾಗಬೇಕು ಎಂದು ಇದೇ ಸಂದರ್ಭದಲ್ಲಿ ಆಹ್ವಾನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಮರಣಿಕೆ ನೀಡಿ ಶಾಲು ಹೊದೆಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next