ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್ ಪಕ್ಕದ ಬಿಳೇಕಹಳ್ಳಿಯಲ್ಲಿ ಅನುಗ್ರಹ ಲೇಔಟ್ ಇದೆ. ಅಲ್ಲೊಂದು ಮನೆ. ಅದರೊಳಗೆ ಕಾಲಿಟ್ಟರೆ ಎಲ್ಲಿ ನೋಡಿದರೂ ಗಮನ ಸೆಳೆಯುವ ವಿಶಿಷ್ಟ ಕಲಾಕೃತಿಗಳು. ಗೋಡೆಯ ತುಂಬ ಸೆರಾಮಿಕ್ ಮ್ಯೂರಲ್ ಪೇಂಟಿಂಗ್‌ನ ವೈವಿಧ್ಯಮಯ ರಚನೆಗಳಿವೆ. ಮತ್ಸ್ಯಕನ್ಯೆ, ಮನುಷ್ಯನ ಜೀವನಚಕ್ರ, ಪ್ರೇಮಿಗಳ ಹಾರ, ಹೋಳಿಯ ಗಣೇಶ ಹೀಗೆ ಒಂದೊಂದು ಕೃತಿಯೂ ಆಧ್ಯಾತ್ಮಿಕ, ಗಾಢವಾದ ಅರ್ಥವನ್ನು ತುಂಬಿ ಆಧುನಿಕ ಕಲಾಶೈಲಿಯನ್ನೂ ಒಳಗೊಂಡಿದೆ. ಅಷ್ಟೇ ಅಲ್ಲ ಒನ್ ಸ್ಟ್ರೋಕ್ ಪೇಂಟಿಂಗ್‌ಗಳು ಷೋಕೇಸ್‌ಗಳಲ್ಲಿ ಮನ ಸೆಳೆಯುವ ಚಿತ್ರಗಳಾಗಿವೆ. ಪಾಟ್‌ಗಳ ಮೇಲೂ ಸುಂದರ ದೃಶ್ಯಗಳು ಮೂಡಿದ ಪಾಟ್ ಪೇಂಟಿಂಗ್, ತೈಲ ವರ್ಣಚಿತ್ರಗಳ ಮುಂದೆ ತಾಸುಗಳ ಕಾಲ ನಿಂತರೂ, ಇನ್ನೂ ನೋಡಬೇಕೆನಿಸುತ್ತದೆ.
ಈ ಕಲಾಕೃತಿಗಳನ್ನು ರಚಿಸಿದವರು ಮೂವತ್ತೂಂದರ ಹರೆಯದ ಪಿ. ಜಿ. ಅನುಪಮಾ. ತನ್ನ ಕಲಾರಚನೆಗಳಿಗೆ ಅವರು ಇಟ್ಟಿರುವ ಹೆಸರು “ಅನುರೂಪಿಕಾ’. ಕಾಸರಗೋಡಿನ
ಕಾಟುಕುಕ್ಕೆ ಬಳಿಯ ಪೂವಳೆಯ ಗೋಪಾಲಕೃಷ್ಣ ಭಟ್ಟರ ವ್ಯಂಗ್ಯಚಿತ್ರಗಳು ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ನಿರಂತರ ಪ್ರಕಟವಾಗುತ್ತಿದ್ದವು. ಕಾಷ್ಠ ಶಿಲ್ಪ, ಕರಟದ ಕಲೆಯಲ್ಲೂ ಅವರದು ಅದ್ಭುತ ಪರಿಣತಿ. ಅವರ ಮಗಳು ಅನುಪಮಾ ಚಿಕ್ಕ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ಆಸಕ್ತರು. ತಂದೆಯಿಂದ ಪ್ರೇರಿತರಾಗಿ ಜಲವರ್ಣದಲ್ಲಿ ಚಿತ್ರಗಳನ್ನು ರಚಿಸುತ್ತಿದ್ದರು. ಅದಕ್ಕೆ ಬಹುಮಾನ ಪಡೆಯುತ್ತಿದ್ದರು. ಕಾಲೇಜಿನಲ್ಲಿ ಕಲಿಯುವಾಗಲೂ ಕೆಲವೊಂದು ಕಲಾಕೃತಿಗಳನ್ನು ರಚಿಸುತ್ತಿದ್ದರೂ ಅದಕ್ಕೊಂದು ನಿರ್ದಿಷ್ಟ ಆಯಾಮ ಸಿಕ್ಕಿದ್ದು ಗಣೇಶ ಪ್ರಸಾದರ ಅರ್ಧಾಂಗಿಯಾಗಿ ಬೆಂಗಳೂರಿಗೆ ಬಂದ ಮೇಲೆ. ಅವರಲ್ಲಿರುವ ಕಲಾಸಕ್ತಿಗೆ ಪ್ರೋತ್ಸಾಹದ ನೀರೆರೆದವರು ಶಿಕ್ಷಕಿಯಾಗಿದ್ದ ಅತ್ತೆ ಸೀತಾಲಕ್ಷಿ$¾.
ಸೆರಾಮಿಕ್ ಹುಡಿಯನ್ನು ಫೆವಿಕಾಲ್‌ನೊಂದಿಗೆ ಸಂಯುಕ್ತ ಗೊಳಿಸಿ ಪ್ಲೆ„ವುಡ್ ಹಲಗೆಯ ಮೇಲೆ ಮ್ಯೂರಲ್ ಅಂದರೆ ಆಧ್ಯಾತ್ಮಿಕ ಅರ್ಥ ತುಂಬುವ ದೃಶ್ಯಗಳನ್ನು ಆಕರ್ಷಕವಾಗಿ ಸೆರೆ ಹಿಡಿಯುವುದು ಅನುಪಮಾ ವೈಶಿಷ್ಟ್ಯ. ನೂರಾರು ಕಲಾಕೃತಿಗಳು ಅವರ ಬೆರಳುಗಳಿಂದ ಸೃಷ್ಟಿಯಾಗಿವೆ. ಒಂದು ಸೆರಾಮಿಕ ಕೃತಿಯ ಸೃಷ್ಟಿಗೆ 25 ದಿನಗಳು ಬೇಕಾಗುತ್ತವೆ. ಕನಿಷ್ಠ ಐದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಶ್ರದ್ಧೆಯಿಂದ ಇದರಿಂದ ಅವರು ತಯಾರಿಸುವ ಕೃತಿಗಳಲ್ಲಿ ಧಾರ್ಮಿಕ ಅರ್ಥ ಮತ್ತು ಸಂದೇಶವಿರುತ್ತದೆ. ಕೇರಳದ ದೇವಾಲಯಗಳು, ಅರಮನೆಗಳಲ್ಲಿ ಮಾತ್ರ ನಮಗೆ ಕಾಣಸಿಗುವ ಅಪರೂಪದ ಇಂಥ ಕೃತಿಗಳು ಅನುರೂಪಿಕಾ ಸೃಷ್ಟಿಯಲ್ಲಿ ಸುಲಭವಾಗಿ ನೋಡಲು ಸಿಗುತ್ತವೆ.
ಅನುಪಮಾ ಯಾವ ವಸ್ತುವನ್ನೂ ನಿರುಪಯೋಗಿ ಎಂದು ಭಾವಿಸುವುದಿಲ್ಲ. ಪಿಸಿ ಪೈಪ್‌ನ ತುಂಡುಗಳಿಂದಲೂ ಒಂದು ಕಲಾ ಸೃಷ್ಟಿಯಾಗುತ್ತದೆ. ಶಂಖಗಳು, ಕಪ್ಪೆಚಿಪ್ಪುಗಳೂ ಕಲೆಯ ಮೆರುಗು ಪಡೆಯುತ್ತವೆ. ಪಿಸ್ತಾದ ಸಿಪ್ಪೆಗಳು ಅರಳಿದ ಕಮಲಗಳಾಗುತ್ತವೆ. ಮರ ಮತ್ತು ಬಿದಿರಿನ ತುಂಡು, ಕಲ್ಲು ಹೀಗೆ ಕಸವೆಂದುಕೊಂಡದ್ದನ್ನೆಲ್ಲ ಅನುಪಮಾ ಬೆರಳುಗಳು ರಸವಾಗಿಸುತ್ತವೆ. ಸೆರಾಮಿಕ್ ಕಲೆಗೆ ಅವರು ಕೃತಕ ವರ್ಣಗಳನ್ನು ಬಳಿಯುವುದಿಲ್ಲ. ತರಕಾರಿಗಳು, ಹಣ್ಣುಗಳು, ಎಲೆಗಳು, ಕಲ್ಲಿನ ಹುಡಿ, ಮಣ್ಣು ಇತ್ಯಾದಿಗಳಿಂದ ಎಲ್ಲ ಬಣ್ಣಗಳನ್ನೂ ಅವರೇ ತಯಾರಿಸಿಕೊಳ್ಳುತ್ತಾರೆ.
ಟಿವಿ ಮೊದಲಾದ ವಿದ್ಯುನ್ಮಾನ ಸಾಮಗ್ರಿಗಳ ವೈರುಗಳು ಕಾಣದಂತೆ ಮಾಡಲು ಅರ್ಧ ಕತ್ತರಿಸಿದ ಪಿವಿಸಿ ಪೈಪ್ ಬಳಸಿ, ಅವರು ತಯಾರಿಸಿದ ಕಲಾಕೃತಿಯೊಂದನ್ನು ಅದಕ್ಕೆ ಅಡ್ಡವಾಗಿ ಇಟ್ಟರೆ ಪ್ರತ್ಯೇಕವಾದ ಶೋಭೆ ಕಾಣಿಸುತ್ತದೆ. ಅನುಪಮಾ ಕಲಾಕೃತಿಗಳ ಪ್ರದರ್ಶನಗಳನ್ನು ಬೆಂಗಳೂರು ಸೇರಿದಂತೆ ಹಲವೆಡೆ ನೀಡಿದ್ದಾರೆ. ಒಂದು ಪ್ರದರ್ಶನವನ್ನು ಕಿಂಗ್‌ಫಿಷರ್ ಸಂಸ್ಥೆ ಆಯೋಜಿಸಿತ್ತು. ಆಗ ಅನೇಕ ಮಂದಿ ವಿದೇಶಿಯರೂ ತುಂಬ ಮೆಚ್ಚಿಕೊಂಡರಂತೆ. ಸೆರಾಮಿಕ್ ಕಲೆಯ ಗಡಿಯಾರ, ಹೂವಿನ ಕುಂಡ ಮತ್ತು ಪೆನ್‌ಸ್ಟಾಂಡ್‌ಗಳಿಗೆ ಈ ಪ್ರದರ್ಶನಗಳಲ್ಲಿ ಅತ್ಯಧಿಕ ಬೇಡಿಕೆಯೂ ಕಂಡುಬಂದಿದೆ. ಬಟ್ಟೆಗಳ ಫ್ಯಾಬ್ರಿಕ್ ಪೇಂಟಿಂಗ್ ಕೂಡ ಅವರು ಮಾಡಿಕೊಡುತ್ತಿದ್ದು ಇದು ಮಹಿಳೆಯರ ಮನ ಗೆದ್ದಿದೆ.
ಪ.ರಾಮಕೃಷ್ಣ ಶಾಸ್ತ್ರಿ