ವಿಜಯಪುರ: ವಿಜಯಪುರ ಜಿಪಂ ಸಿಇಒ ಹುಲ್ ಶಿಂಧೆ ಕೊಲ್ಹಾರ ತಾಲೂಕಿನ ಕೂಡಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಗ್ರಾಮಸ್ಥರ ಅಹವಾಲು ಆಲಿಸಿದರು. ಅಲ್ಲದೇ ಸ್ಥಳೀಯ ಶಾಲೆಯಲ್ಲಿ ಬಿಸಿಯೂಟ ಸವಿಯುವ ಮೂಲಕ ಅಕ್ಷರ ದಾಸೋಹ ಸ್ಥಿತಿಗತಿ ಅವಲೋಕಿಸಿದರು.
ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ 4ನೇ ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅನವಶ್ಯಕವಾಗಿ ಗೈರು ಹಾಜರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪಿಡಿಒ ಐ.ಜಿ. ಹೊಸಮಠ ಅವರಿಗೆ ಸೂಚಿಸಿದರು. ಹಳೆಯ ಶಾಲಾ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ನಿರ್ದೇಶನ ನೀಡಿದರು.
ಅಕ್ಷರ ದಾಡೋಹದ ಶಾಲಾ ಬಿಸಿಯೂಟದ ಅಡುಗೆ ಕೊಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಿಇಒ ಶಿಂಧೆ, ಮಕ್ಕಳ ಆಹಾರ ತಯಾರಿಕೆ ಬೆಳಸು ಆಹಾರ ಧಾನ್ಯ ಪರಿಶೀಸಲಿಸಿದರು. ಇದಲ್ಲದೇ ಇದೆ ಶಾಲೆಯಲ್ಲಿ ಮಕ್ಕಳಿಗೆ ತಯಾರಿಸಿದ ಬಿಸಿಯೂಟ ಆಹಾರವನ್ನು ಸವಿದು ಗುಣಮಟ್ಟ ಪರೀಕ್ಷಿಸಿದರು. ನಂತರ ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ, ಪುಸ್ತಕ ಓದಲು ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ಶಿಂಧೆ, ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಆಟವಾಡಲು ಮೈದಾನವನ್ನು ಅಭಿವೃದ್ಧಿ ಪಡಿಸಲು ಸಲಹೆ ಮಾಡಿದರು. ಅಂಗನವಾಡಿ ಕೇಂದ್ರದ ಸ್ಥಳ ಅತಿಕ್ರಮಿಸಿ, ಅನ ಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವಿಗೆ ತುರ್ತು ಕ್ರಮಕ್ಕೆ ಮುಂದಾಗಲು ಸ್ಥಳೀಯ ಆಡಳಿಕ್ಕೆ ತಾಕೀತು ಮಾಡಿದರು.