Advertisement

ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ

06:05 AM May 06, 2018 | Team Udayavani |

ಬೆಂಗಳೂರು: ನೆರೆ ರಾಜ್ಯದ ಗಡಿ ಜಿಲ್ಲೆಗಳಿಂದ ರಾಜ್ಯಕ್ಕೆ ಬರುವ ಹಣ ಮತ್ತು ಹೆಂಡಕ್ಕೆ ಕಡಿವಾಣ ಹಾಕಿ ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡಲು ಅಂತಾರಾಜ್ಯ ಮತ್ತು ಅಂತರ್‌ಜಿಲ್ಲಾ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಹೇಳಿದ್ದಾರೆ.

Advertisement

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಆಯಾ ರಾಜ್ಯಗಳ ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗುವುದೆಂದು ಅಲ್ಲಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

ಗೋವಾದಿಂದ ರಾಜ್ಯಕ್ಕೆ ಬರುತ್ತಿದ್ದ ಮದ್ಯ ಮತ್ತು ಕೇರಳದಿಂದ ಸಾಗಿಸುತ್ತಿದ್ದ 1.75 ಕೋಟಿ ರೂ.ಬೇನಾಮಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಅಂತಾರಾಜ್ಯಅಂತರ್‌ಜಿಲ್ಲಾ ನೆರವು ಸೂತ್ರದಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಗೆ 30 ಜಿಲ್ಲೆಗಳಲ್ಲಿ 1,540 ಫ್ಲೈಯಿಂಗ್‌ ಸ್ಕ್ವಾಡ್‌, 2,131 ಸ್ಟಾಟಿಕ್‌ ಸರ್ವಲೆನ್ಸ್‌ ಟೀಮ್‌, 600 ವಿಡಿಯೋ ಸರ್ವೆಲೆನ್ಸ್‌ ಟೀಮ್‌, 266 ವಿಡಿಯೋ ವೀವಿಂಗ್‌ ಟೀಮ್‌, 248 ಅಕೌಂಟಿಗ್‌ ಟೀಮ್‌ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ 135 ಚುನಾವಣಾ ವೆಚ್ಚ ವೀಕ್ಷಕರು, 281 ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು, 155 ಸಾಮಾನ್ಯ ವೀಕ್ಷಕರು, 35 ಪೊಲೀಸ್‌ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಮಾ.27ರಿಂದ ಇಲ್ಲಿವರೆಗೆ 67.27 ಕೋಟಿ ನಗದು, 23.28 ಕೋಟಿ ಮೌಲ್ಯದ ನಕಲಿ ಮದ್ಯ, ಬೆಳ್ಳಿ, ಬಂಗಾರ ಸೇರಿ 61.74 ಕೋಟಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Advertisement

600 ಸಖೀ ಮತಗಟ್ಟೆ: ರಾಜ್ಯದಲ್ಲಿ 58,002 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರಿಂದಲೇ ನಿರ್ವಹಣೆಯಾಗುವ 600 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 50, ಚಿಕ್ಕಬಳ್ಳಾಪುರದಲ್ಲಿ 30 ಅತಿ ಹೆಚ್ಚು ಸಖೀ ಮತಗಟ್ಟೆಗಳಿವೆ. ಅದೇ ಮಾದರಿಯಲ್ಲಿ ದಿವ್ಯಾಂಗರಿಂದ ನಿರ್ವಹಣೆಯಾಗುವ 13 ಮತಗಟ್ಟೆಗಳನ್ನೂ ಸ್ಥಾಪಿಸಲಾಗುತ್ತಿದೆ ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಒಂದಕ್ಕಿಂತ ಹೆಚ್ಚು ದಿವ್ಯಾಂಗ ಚುನಾವಣಾ ಸಿಬ್ಬಂದಿಯಿರುವ ಮತಗಟ್ಟೆಗಳ ಸಂಖ್ಯೆ 56 ಇದೆ. ಈ ಬಾರಿಯ ಚುನಾವಣೆಯಲ್ಲಿ
112 ದಿವ್ಯಾಂಗ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದೇ ರೀತಿ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ರೀತಿ-ರೀವಾಜುಗಳನ್ನು ಪ್ರತಿನಿಧಿಸುವ 28 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

3.65 ಲಕ್ಷ ಚುನಾವಣಾ ಸಿಬ್ಬಂದಿ: ಚುನಾವಣಾಕಾರ್ಯಕ್ಕೆ ಒಟ್ಟು 3.65 ಲಕ್ಷ ಸಿಬ್ಬಂದಿ ನಿಯೋಜಿಸಲಾಗಿದೆ.ಇದರಲ್ಲಿ 12 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ರಾಜ್ಯದ 75 ಸಾವಿರ ಹಾಗೂ ನೆರೆಯ ರಾಜ್ಯಗಳಿಂದ 40 ಸಾವಿರ ಪೊಲೀಸ್‌ ಸಿಬ್ಬಂದಿ ಸೇರಿ ಒಟ್ಟು 1.15 ಲಕ್ಷ ಪೊಲೀಸ್‌ ಮತ್ತು ಅರೆ ಪೊಲೀಸ್‌ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಕೇಂದ್ರ ಶಸಸOಉ ಮೀಸಲು
ಪಡೆಯ 575 ತುಕಡಿಗಳು ರಾಜ್ಯಕ್ಕೆ ಬಂದಿವೆ.

3 ಸಾವಿರ ಮತಗಟ್ಟೆಗಳ ವೆಬ್‌ಕಾಸ್ಟಿಂಗ್‌: ತೀರಾ ಸಮಸ್ಯಾತ್ಮಕ ಎಂದು ಗುರುತಿಸಲಾಗಿರುವ 3,500 ಮತಗಟ್ಟೆಗಳಲ್ಲಿ ಇದೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. ವೆಬ್‌ಕಾಸ್ಟಿಂಗ್‌ ಮೂಲಕ ಮತಗಟ್ಟೆಗಳಲ್ಲಿ ಏನು ನಡೆಯುತ್ತಿದೆ ಎಂಬ ಕ್ಷಣ-ಕ್ಷಣದ ಮಾಹಿತಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಮತ್ತು ರಾಜ್ಯ ಮುಖ್ಯ 
ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಕುಳಿತಲ್ಲೇ ನೋಡಬಹುದು ಎಂದು ಸಂಜೀವ ಕುಮಾರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next