Advertisement

ಕೊಚ್ಚೆ ಕಂಡು ಜನರ ಹೆಗಲೇರಿದ ಸಿಇಒ!

03:45 AM Mar 25, 2017 | |

ರಾಯಚೂರು: ಕುಡಿವ ನೀರಿನ ಸಮಸ್ಯೆ ವಾಸ್ತವ ಅರಿಯಲು ಗ್ರಾಮಕ್ಕೆ ತೆರಳಿದ್ದ ಜಿಪಂ ಸಿಇಒ ಎಂ. ಕೂರ್ಮಾರಾವ್‌ ಕೊಚ್ಚೆಯಲ್ಲಿ ಇಳಿಯದ ಕಾರಣ ಗ್ರಾಮಸ್ಥರೇ ಹೆಗಲ ಮೇಲೆ ಹೊತ್ತು ಸಾಗಿರುವ ಘಟನೆ ಇದೀಗ ಟೀಕೆಗೆ ಗುರಿಯಾಗಿದೆ.

Advertisement

ಕುಡಿವ ನೀರಿನ ಸಮಸ್ಯೆ ವಿಚಾರವಾಗಿ ಜಿಪಂ ಸದಸ್ಯರು ಕೆಲ ದಿನಗಳ ಹಿಂದೆ ನಡೆದ ಸಾಮಾನ್ಯ ಸಭೆ ಬಹಿಷ್ಕರಿಸಿದ್ದರು. ಈ ವೇಳೆ ಖುದ್ದು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದ್ದರು. ಅದರಂತೆ ಭೇಟಿ ನೀಡಿ ತಾಲೂಕಿನ ಆತೂRರು ಗ್ರಾಮದ ಶುದ್ಧ ಕುಡಿವ ನೀರಿನ ಘಟಕಕ್ಕೆ ತೆರಳುವ ಹಾದಿಯಲ್ಲಿ ಕೊಚ್ಚೆ ಇದ್ದ ಕಾರಣ ಸಿಇಒ ಅಲ್ಲಿಂದಲೇ ವೀಕ್ಷಣೆ ಮಾಡಲು ಮುಂದಾದರು. ಆ ಕಡೆ ತೆರಳಿದ್ದ ಜಿಪಂ ಸದಸ್ಯ ಕೇಶವ ರೆಡ್ಡಿ, ಸಿಇಒ ಅವರೂ ಬರಬೇಕೆಂದು ತಾಕೀತು ಮಾಡಿದರು. ಇದಕ್ಕೆ ಸಿಇಒ ಹಿಂದೇಟು ಹಾಕಿದ್ದರಿಂದ ಈ ವೇಳೆ ಗ್ರಾಮಸ್ಥರು “ನಾವು ಕರೆ ತರುತ್ತೇವೆ’ ಎಂದು ಹೆಗಲ ಮೇಲೆ ಹೊತ್ತುಕೊಂಡರು. ಆದರೆ, ಸಿಇಒ ಮಾತ್ರ ಇದ್ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸದೆ ಉತ್ಸವ ಮೂರ್ತಿಯಂತೆ ಕುಳಿತು ಸಾಗಿದರು. ಅಚ್ಚರಿ ಎಂದರೆ ಅಲ್ಲಿಂದ ಹಿಂದಿರುವಾಗಲೂ ಇದೇ ಸನ್ನಿವೇಶ ಮರುಕಳಿಸಿತು. ಆಗಲೂ ಸಿಇಒ ಬಾಯಿಬಿಡದೆ ಜನರ ಹೆಗಲೇರಿದ್ದಾರೆ.

ಸಿಇಒ ಸ್ಪಷ್ಟನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಇಒ ಎಂ.ಕೂರ್ಮಾರಾವ್‌, ಜನ ಅಭಿಮಾನದಿಂದ ಹೊತ್ತುಕೊಂಡು ಹೋಗಿದ್ದಾರೆ. ನಾನು ಮತ್ತು ನನ್ನ ಗನ್‌ಮ್ಯಾನ್‌ ಬೇಡ ಎಂದಿದ್ದೇವೆ. ಯಾರಿಗೂ ಬಲವಂತ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದನದಲ್ಲೂ ಖಂಡನೆ: ಸಿಇಒ ವಿರುದ್ಧ ಸೂಕ್ತ ಕ್ರಮ
ವಿಧಾನಸಭೆ:
ರೈತರ ಹೆಗಲ ಮೇಲೆ ಕುಳಿತು ನಾಲೆ ದಾಟಿದ ರಾಯಚೂರು ಜಿಲ್ಲಾ ಪಂಚಾಯತಿ ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯಲ್ಲಿ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್‌ ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾಲಿಗೆ ಬೂಟು ಹಾಕಿಕೊಂಡು ರೈತರ ಹೆಗಲ ಮೇಲೆ ಕುಳಿತು ಹೋಗಿರುವುದು ಗುಲಾಮಗಿರಿಯ ಪದ್ಧತಿಯಾಗಿದ್ದು, ಅಧಿಕಾರಿಯ ನಡವಳಿಕೆಯಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹಾಗೂ ಸ್ಪೀಕರ್‌ ಕೆ.ಬಿ. ಕೋಳಿವಾಡ ಕೂಡ ಈ ಪ್ರಕರಣವನ್ನು ಖಂಡಿಸಿ, ಇದೊಂದು ಅಮಾನವೀಯ ಘಟನೆ, ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡು ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅವರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅಧಿಕಾರಿ ಬಗ್ಗೆ ವರದಿ ಪಡೆದು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next