Advertisement

ರಾಜ್ಯೋತ್ಸವಕ್ಕೆ  ಸಂಭ್ರಮ ತುಂಬುತ್ತಿರುವ ಶತಮಾನದ ಶಾಲೆಗಳು

10:42 AM Nov 01, 2017 | Team Udayavani |

ಪಾಂಡೇಶ್ವರ ಶಾಲೆ
1902ರಲ್ಲಿ ಪಾಂಡೇಶ್ವರದಲ್ಲಿ ಆರಂಭಗೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 2002ರಲ್ಲಿ ನೂರು ವರ್ಷಗಳನ್ನು ಪೂರೈಸಿತ್ತು. ಆದರೆ ಶಾಲೆಯ ಶತಮಾನೋತ್ಸವ ಕೆಲವರ್ಷ ತಡವಾಗಿ ಆಚರಣೆಗೊಂಡಿದೆ. ಆದರೆ ಶಾಲೆಯಲ್ಲಿ ಇನ್ನೂ ಹಳೆ ವಿದ್ಯಾರ್ಥಿ ಸಂಘ ರಚನೆಗೊಂಡಿಲ್ಲ. ಶಾಲೆಯ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ.

Advertisement

ಶಾಲೆ ಹಳೆಯದಾದರೂ ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಶಾಲೆಯ ಸುತ್ತಮುತ್ತಲಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ
ನೀಡಲಾಗಿದ್ದು, ನೀರಿನ ಸೌಲಭ್ಯವೂ ಉತ್ತಮವಾಗಿದೆ. ಆದರೆ ವಿದ್ಯಾರ್ಥಿಗಳ ಕೊರತೆ ಕಾಣುತ್ತಿದ್ದು, ಪ್ರಸ್ತುತ ಶೈಕ್ಷಣಿಕ
ವರ್ಷದಲ್ಲಿ 64 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 4 ಮಂದಿ ಶಿಕ್ಷಕರು ಕಾರ್ಯಾಚರಿಸುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕಿ ವನಮಾಲಾ ತಿಳಿಸಿದ್ದಾರೆ. 

ನಾವು ಪಾಂಡೇಶ್ವರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಈ ಶಾಲೆಯು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಉತ್ತಮ ಶಿಕ್ಷಕರನ್ನು ಹೊಂದಿ ಗುಣ ಮಟ್ಟದ ಶಿಕ್ಷಣ ಲಭ್ಯವಾಗುತ್ತಿತ್ತು. ಪಾಠದ ಜತೆಗೆ ಕೃಷಿಯಂತಹ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಗಮನ ನೀಡಲಾಗುತ್ತಿತ್ತು.

ಪ್ರಸ್ತುತ ತಾನು ವೈದ್ಯನಾಗಿದ್ದು, ನನ್ನ ಬೆಳವಣಿಗೆಗೆ ಆ ಶಾಲೆಯೂ ಪ್ರಮುಖ ಕಾರಣವಾಗಿದೆ. ಕೆಲದಿನಗಳ ಹಿಂದೆ ನಾನು ಹಾಗೂ ನನ್ನ ಸಹಪಾಠಿ ಶಾಲೆಗೆ ಭೇಟಿ ನೀಡಿ ಧನಸಹಾಯವನ್ನೂ ನೀಡಿದ್ದೇವೆ.

ಪ್ರಸ್ತುತ ಶಾಲೆಯಲ್ಲಿರುವ ಶಿಕ್ಷಕರು ಶಾಲೆಯ ಬೆಳವಣಿಗೆಗೆ ಉತ್ತಮ ರೀತಿಯಲ್ಲಿ ಶ್ರಮಿಸುತ್ತಿದ್ದು, ಇತರ ಹಳೆ ವಿದ್ಯಾರ್ಥಿಗಳು ಕೂಡ ಸಹಾಯವನ್ನು ನೀಡಿ ಶಾಲೆಯು ಮತ್ತೆ ಹಿಂದಿನ ಗತವೈಭವಕ್ಕೆ ಮರಳಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಡಾ| ಭರತ್‌ಕುಮಾರ್‌ ಎಂ. ಹೇಳುತ್ತಾರೆ. 

Advertisement

ಗಾಂಧಿನಗರ ಶಾಲೆ
1918ರಲ್ಲಿ ಆರಂಭವಾದ ನಗರದ ಉರ್ವ ಮಾರ್ಕೆಟ್‌ ಬಳಿಯ ಗಾಂಧಿನಗರ ಸರಕಾರಿ ಹಿ.ಪ್ರಾ.ಶಾಲೆಯು ಈ ವರ್ಷ
ಶತಮಾನೋತ್ಸವದ ಸಂಭ್ರಮದಲ್ಲಿದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ 1ರಿಂದ 8ನೇ ತರಗತಿಯ ವರೆಗೆ
180 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿಂದೆ ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭ್ಯವಾಗಿದೆ.
 ಪ್ರಸ್ತುತ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸಹಿತ 8 ಮಂದಿ ಖಾಯಂ ಶಿಕ್ಷಕರು ಹಾಗೂ ಇಬ್ಬರು ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಪ್ಯೂಟರ್‌ ತರಗತಿ, ಗ್ರಂಥಾಲಯ ವ್ಯವಸ್ಥೆಯೂ ಇರುತ್ತದೆ. ಇಲ್ಲಿಯೂ ಹೊರ ಜಿಲ್ಲೆಗಳ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ.

ದಾನಿಗಳ ನೆರವಿನಿಂದ ಶಾಲೆಯು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ. ಶತಮಾನೋತ್ಸವ ಸಂದರ್ಭದಲ್ಲಿ
ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮುಂದಿನ ಜನವರಿಯಲ್ಲಿ ಶತಮಾನೋತ್ಸವ ಆಚರಿಸುವ ಚಿಂತನೆ ಇದೆ ಎಂದು ಮುಖ್ಯ ಶಿಕ್ಷಕಿ ಯಶೋದಾ ಬಿ. ತಿಳಿಸಿದ್ದಾರೆ. 

ಮಣ್ಣಗುಡ್ಡ ಶಾಲೆ
1913ರಲ್ಲಿ ಆರಂಭಗೊಂಡ ಮಣ್ಣಗುಡ್ಡ ಸರಕಾರಿ ಹಿ.ಪ್ರಾ.ಶಾಲೆಯು 2013ರಲ್ಲಿ ಶತಮಾನೋತ್ಸವವನ್ನು ಆಚರಿಸಿತ್ತು. ಒಂದು ಸಮಯದಲ್ಲಿ ವಿದ್ಯಾರ್ಥಿಗಳಿಲ್ಲದೆ ಕಂಗಾಲಾಗಿದ್ದ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ 1ನೇ ತರಗತಿಯಿಂದ 7ನೇ ತರಗತಿವರೆಗೆ 167 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಎಲ್ಲ ಸೌಲಭ್ಯಗಳಿದ್ದು, ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷಣ ಲಭ್ಯವಾಗುತ್ತಿದೆ.

ಪ್ರಸ್ತುತ ಶಾಲೆಯಲ್ಲಿ ಸೈನ್ಸ್‌ ಲ್ಯಾಬ್‌, ದೃಶ್ಯಾವ್ಯ ಕೊಠಡಿ (ಎವಿ ರೂಮ್‌), ಕಂಪ್ಯೂಟರ್‌ ಕೊಠಡಿ, ನ್ಪೋಕನ್‌ ಇಂಗ್ಲಿಷ್‌, ಕೀಬೋರ್ಡ್‌, ಗಿಟಾರ್‌ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ. ಶಾಲೆಯ ಹಳೆ ವಿದ್ಯಾರ್ಥಿಗಳೇ ಹಣ ಹಾಕಿ ಶಾಲಾ ವಾಹನವನ್ನೂ ಆರಂಭಿಸಿದ್ದಾರೆ. ದಾನಿಗಳ ನೆರವಿನಿಂದ ಪ್ರಸ್ತುತ ಶಾಲೆ ಉತ್ತಮ ಸ್ಥಿತಿಯಲ್ಲಿದೆ ಎಂದು
ಮುಖ್ಯ ಶಿಕ್ಷಕಿ ಜೋಯಿಸ್‌ ಹೆನ್ರಿಟಾ ಹೇಳುತ್ತಾರೆ.

ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಪರಿಶ್ರಮದಿಂದ ಪ್ರಸ್ತುತ ಶಾಲೆ ಉತ್ತಮವಾಗಿದೆ. ಶಾಲೆಯಲ್ಲಿ ಪ್ರಸ್ತುತ ಸ್ಥಳೀಯ ವಿದ್ಯಾರ್ಥಿಗಳು ಶೇ.5 ಇಲ್ಲ. ಎಲ್ಲರೂ ಇತರ ಜಿಲ್ಲೆಗಳ
ಕಾರ್ಮಿಕರ ಮಕ್ಕಳಾಗಿದ್ದಾರೆ. ಶಾಲಾ ವಾಹನದ ಮೂಲಕ ಕೊಟ್ಟಾರ, ಕೋಡಿಕಲ್‌, ಕಾವೂರು ಭಾಗದಿಂದ
ವಿದ್ಯಾರ್ಥಿಗಳನ್ನು ಕರೆತರಲಾಗುತ್ತದೆ ಎಂದು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸತೀಶ್‌ ಶೆಟ್ಟಿ ಕೊಡಿಯಾಲ್‌
ಬೈಲ್‌ ಹೇಳುತ್ತಾರೆ. 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next