Advertisement

ಶತಮಾನದ ಸೇತುವೆ ಅಂದಗೆಡಿಸಿದ ಗಿಡ-ಗಂಟಿ!

03:41 PM May 02, 2022 | Team Udayavani |

ಹೊನ್ನಾಳಿ: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಹೊನ್ನಾಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಸೇತುವೆಗೀಗ ಶತಮಾನೋತ್ಸವ ಸಂಭ್ರಮ. ಆದರೆ ಇಕ್ಕೆಲಗಳಲ್ಲಿ ಗಿಡ ಗಂಟಿಗಳು ಬೆಳೆದು ಸೇತುವೆಯ ಸುರಕ್ಷತೆಗೆ ಅಪಾಯ ತಂದೊಡ್ಡಿವೆ.

Advertisement

ಇದೇ ತಿಂಗಳು ಅಥವಾ ಜೂನ್‌ನಲ್ಲಿ ತುಂಗಭದ್ರಾ ಸೇತುವೆಯ ಶತಮಾನೋತ್ಸವ ಆಚರಣೆ ಸಮಾರಂಭವನ್ನು ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಪೂರ್ವಭಾವಿ ಸಭೆ ನಡೆಸಲಾಗಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಇತರ ಜಿಲ್ಲೆಗಳ ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇತುವೆ ಬಗ್ಗೆ ಪರಿಶೀಲಿಸುವ ಹಾಗೂ ಸಂಶೋಧಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸೇತುವೆ ಅಕ್ಕಪಕ್ಕ ಇರುವ ಗಿಡ-ಗಂಟಿಗಳನ್ನು ಸ್ವತ್ಛಗೊಳಿಸದೇ ಇರುವುದು ಅಚ್ಚರಿ ಮೂಡಿಸಿದೆ. ಸಂಬಂಧಪಟ್ಟ ಇಲಾಖೆಯವರು ಸೇತುವೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆಗೆಯದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಉತ್ತರ-ದಕ್ಷಿಣದ ಸಂಪರ್ಕ ಸೇತು

ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಧರ್ಮಸ್ಥಳ, ಮಂಗಳೂರು, ಉಡುಪಿ-ಮಣಿಪಾಲ, ಮೈಸೂರು, ಹಾಸನ, ಶ್ರವಣಬೆಳಗೊಳ ಇತ್ಯಾದಿ ದಕ್ಷಿಣ ಹಾಗೂ ಕರಾವಳಿ ಕರ್ನಾಟಕದ ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳಿಗೆ ಈ ಸೇತುವೆಯ ಮೂಲಕವೇ ಸಂಚರಿಸಬೇಕು. ಹಾಗಾಗಿ ಉತ್ತರ-ದಕ್ಷಿಣ ಕರ್ನಾಟಕ ಬೆಸೆಯುವ ಏಕೈಕ ಸಂಪರ್ಕ ಸೇತು ಎಂಬ ಖ್ಯಾತಿಯೂ ಈ ಸೇತುವೆಗೆ ಇದೆ.

ತುಂಗಭದ್ರಾ ನದಿ ಸೇತುವೆಯ ಎರಡು ಕಮಾನುಗಳ ಮಧ್ಯದ 60 ಅಡಿ ಎತ್ತರ, 40 ಅಡಿ ಅಗಲದ ಕಂಬ ಇಂದಿಗೂ ಗಟ್ಟಿಯಾಗಿದೆ. ಸುಮಾರು 15-20 ಅಡಿಗಳಷ್ಟು ಆಳದ ಬುನಾದಿ ಈ ಸೇತುವೆಯ ಭದ್ರತೆಯ ಗುಟ್ಟು. ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯ ಮತ್ತು ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯಗಳೆರಡೂ ನಿರ್ಮಾಣವಾಗದ ಅಂದಿನ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಅಧಿಕ ಪ್ರಮಾಣದ ನೀರಿನ ಹರಿವು ಇರುತ್ತಿತ್ತು. ಅಂತಹ ಸಂದರ್ಭದಲ್ಲಿ ಸೇತುವೆಯ ಬುನಾದಿ ಹಾಗೂ ಇತರ ಕಾಮಗಾರಿಗಳನ್ನು ಹೇಗೆ ಪೂರ್ಣಗೊಳಿಸಲಾಯಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಶತಮಾನ ಕಂಡ ಸೇತುವೆಯ ಸೌಂದರ್ಯೀಕರಣ ಹಾಗೂ ಸುರಕ್ಷತೆ ಕಾಪಾಡಲು ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ.

Advertisement

ಸೇತುವೆಯ ಒಂದಿಂಚೂ ಹಾಳಾಗದಿರುವುದು ಅಚ್ಚರಿ

ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರು ನೀಲನಕ್ಷೆ ತಯಾರಿಸಿ ತುಂಗಭದ್ರಾ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಸೇತುವೆ ನಿರ್ಮಾಣ ಕಾರ್ಯ 1918ರಲ್ಲಿ ಪ್ರಾರಂಭಗೊಂಡು 1922ಕ್ಕೆ ಪೂರ್ಣಗೊಂಡಿತು. ಕೇವಲ 3.22 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಗುಣಮಟ್ಟದಲ್ಲಿ ಇಂದಿನ ಕೋಟ್ಯಂತರ ವೆಚ್ಚದ ಕಾಮಗಾರಿಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಗುಣಮಟ್ಟದ ಸೈಜುಗಲ್ಲುಗಳು, ಸುಣ್ಣದ ಕಲ್ಲು, ಬೆಲ್ಲ, ಮರಳು ಇತ್ಯಾದಿ ವಸ್ತುಗಳಿಂದ ನಿರ್ಮಾಣಗೊಂಡಿರುವ ಈ ಸೇತುವೆ ಇಂದಿಗೂ ಸುಭದ್ರವಾಗಿರುವುದು ಅಂದಿನ ಜನರ ಕಾರ್ಯದಕ್ಷತೆ, ನೈಪುಣ್ಯತೆಗೆ ಸಾಕ್ಷಿ. 15 ಮೀಟರ್‌ಗಳಷ್ಟು ಅಗಲದ ಒಟ್ಟು 21 ಕಮಾನುಗಳ ಮೇಲೆ ಈ ಸೇತುವೆ ನಿಂತಿದೆ. ಸೇತುವೆಯ ಎರಡು ಬದಿಗಳ ನಡುವಿನ ಅಂತರ 5 ಮೀಟರ್‌ ಇದೆ. ನದಿ ನೀರಿನ ಹರಿವಿನ ಅಗಲ 365 ಮೀಟರ್‌ಗಳಷ್ಟಿದ್ದು, ಇದುವರೆಗೂ ಸೇತುವೆಯ ಒಂದಿಂಚೂ ಕೂಡ ಹಾಳಾಗದಿರುವುದು ವಿಶೇಷ.

-ಎಂ.ಪಿ.ಎಂ ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next