ನವದೆಹಲಿ: ನೆರೆದೇಶಗಳೊಂದಿಗೆ ಉದ್ಯಮದಲ್ಲಿ ಪರಸ್ಪರ ಸಹಕಾರವನ್ನು ವೃದ್ಧಿಸುವ ಉದ್ದೇಶದೊಂದಿಗೆ ಭಾರತವು ತನ್ನ ನೆರೆರಾಷ್ಟ್ರಗಳೊಂದಿಗೆ “ನವೋದ್ಯಮ ವಿನಿಮಯ ಕಾರ್ಯಕ್ರಮ” ಆಯೋಜಿಸಲು ಮುಂದಾಗಿದೆ. ಈಗಾಗಲೇ ಬಾಂಗ್ಲಾದೇಶದೊಂದಿಗೆ ಇಂಥ ವಿನಿಯಮ ಯೋಜನೆಗೆ ಚೌಕಟ್ಟು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಭೂತಾನ್ ಮತ್ತು ನೇಪಾಳದೊಂದಿಗೂ ಈ ಯೋಜನೆ ಸಾಕಾರಗೊಳ್ಳಲಿದೆ.
ಬಾಂಗ್ಲಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಭಾರತ ಮತ್ತು ಬಾಂಗ್ಲಾದ ಸುಮಾರು 50 ಸ್ಟಾರ್ಟಪ್‌ಗಳು ಪರಸ್ಪರರ ದೇಶಕ್ಕೆ ಭೇಟಿ ನೀಡಿ ಪಾಲುದಾರಿಕೆ, ಉದ್ಯಮ ಸಂಬಂಧ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ. ತಂತ್ರಜ್ಞಾನ, ನಾವೀನ್ಯತೆ, ಇನ್‌ಕ್ಯುಬೇಟರ್‌ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ವಲಯಗಳಲ್ಲಿ ಪರಿಕಲ್ಪನೆಗಳ ವಿನಿಮಯಕ್ಕೆ ಇದು ದಾರಿಮಾಡಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನೇಪಾಳ ಮತ್ತು ಭೂತಾನ್‌ನ ಸ್ಟಾರ್ಟಪ್‌ಗಳೊಂದಿಗೆ ಪ್ರತಿ ವರ್ಷ ಹೆಚ್ಚು ರಚನಾತ್ಮಕ ವಿನಿಮಯ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ, ದೇಶದಲ್ಲಿ ಸ್ಟಾರ್ಟಪ್ ವ್ಯವಸ್ಥೆಯನ್ನು ರೂಪಿಸುವ ಮತ್ತು ಉದ್ಯೋಗಾಕಾಂಕ್ಷಿಗಳ ಬದಲಾಗಿ ಉದ್ಯೋಗ ಸೃಷ್ಟಿಸುವವರ ದೇಶವಾಗಿ ಭಾರತವನ್ನು ಬದಲಾಯಿಸುವ ನಿಟ್ಟಿನಲ್ಲಿ 2016ರಲ್ಲಿ ಕೇಂದ್ರ ಸರ್ಕಾರವು ಸ್ಟಾರ್ಟಪ್ ಇಂಡಿಯಾ ಯೋಜನೆ ಆರಂಭಿಸಿತ್ತು. ಪ್ರಸ್ತುತ ದೇಶದಲ್ಲಿ 61 ಸಾವಿರಕ್ಕೂ ಅಧಿಕ ನವೋದ್ಯಮಗಳಿವೆ. 55ರಷ್ಟು ಕೈಗಾರಿಕೆಗಳಿಗೆ ಇದು ವಿಸ್ತರಿಸಲ್ಪಟ್ಟಿದೆ.