ನವದೆಹಲಿ: ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಜುಲೈ ತಿಂಗಳಿನಲ್ಲಿ 12 ಕೋಟಿ ಕೋವಿಡ್ 19 ಲಸಿಕೆಗಳನ್ನು ಪಡೆಯಲಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ (ಜುಲೈ 08) ತಿಳಿಸಿದೆ.
ಇದನ್ನೂ ಓದಿ:ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಮನೆಯ ಮೇಲೆ ಪಲ್ಟಿ; ಓರ್ವನಿಗೆ ಗಂಭೀರ ಗಾಯ
ಕೋವಿಡ್ ಲಸಿಕೆ ಉತ್ಪಾದನಾ ಸಂಸ್ಥೆಗಳ ಜತೆಗಿನ ಚರ್ಚೆಯ ಆಧಾರದ ಮೇಲೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2021ರ ಜುಲೈ ತಿಂಗಳಿನಲ್ಲಿ 12 ಕೋಟಿಗಿಂತ ಅಧಿಕ ಪ್ರಮಾಣದ ಕೋವಿಡ್ ಲಸಿಕೆಯನ್ನು ಪಡೆಯಲಿದೆ ಎಂದು ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ವಿವರಿಸಿದೆ.
ರಾಜ್ಯಗಳು ಪಡೆಯಲಿರುವ ಕೋವಿಡ್ 19 ಲಸಿಕೆ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಈ ಮೊದಲು ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ವರದಿ ವಿವರಿಸಿದೆ.
ಜುಲೈ ಮೊದಲ ವಾರದಲ್ಲಿ ಶೇ.32ರಷ್ಟು ಲಸಿಕೆ ವಿತರಣೆಯಲ್ಲಿ ಇಳಿಕೆ ಕಂಡಿದೆ ಎಂಬ ಮಾಧ್ಯಮಗಳ ವರದಿಯನ್ನು ಸಚಿವಾಲಯ ತಳ್ಳಿ ಹಾಕಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯವಿರುವ ಲಸಿಕೆಗಳನ್ನು ಮುಂಚಿತವಾಗಿ ಪಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.