ಹೊಸದಿಲ್ಲಿ : ಲೋಕಪಾಲರ ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಸಮಿತಿಯಲ್ಲಿ ಖಾಲಿ ಉಳಿದಿರುವ ಪ್ರಖ್ಯಾತ ನ್ಯಾಯವೇತ್ತರೋರ್ವರ ಸ್ಥಾನವನ್ನು ತುಂಬುವ ಪ್ರಕ್ರಿಯೆ ಇದೀಗ ಸಾಗುತ್ತಿದೆ ಎಂದು ಕೇಂದ್ರ ಸರಕಾರ ಇಂದು ಮಂಗಳವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಂದು ಜಸ್ಟಿಸ್ ರಂಜನ್ ಗೊಗೋಯ್ ನೇತೃತ್ವದ ಪೀಠಕ್ಕೆ “ಲೋಕಪಾಲ ಆಯ್ಕೆ ಸಮಿತಿಗೆ ಪ್ರಖ್ಯಾತ ನ್ಯಾಯವೇತ್ತರೋರ್ವರನ್ನು ಸೇರಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ ಮತ್ತು ಆ ಪ್ರಕ್ರಿಯೆಯು ಈಗ ನಡೆಯುತ್ತಿದೆ’ ಎಂದು ಹೇಳಿದರು.
ಲೋಕಪಾಲ ನೇಮಕಾತಿ ಪ್ರಕ್ರಿಯೆಯು ಆದಷ್ಟು ಬೇಗನೆ ಮುಗಿಯುವುದನ್ನು ತಾನು ನಿರೀಕ್ಷಿಸುತ್ತಿದ್ದು ಈ ಹಂತದಲ್ಲಿ ಯಾವುದೇ ಆದೇಶ ಹೊರಡಿಸುವ ಅಗತ್ಯ ಇಲ್ಲವೆಂದು ತಾನು ತಿಳಿಯುತ್ತೇನೆ ಎಂದು ನ್ಯಾಯ ಪೀಠವು ಹೇಳಿತು.
ಲೋಕಪಾಲ ನೇಮಕಾತಿ ವಿಷಯದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 15ಕ್ಕೆ ನಿಗದಿಸಿತು.
ಹಿರಿಯ ವಕೀಲ ಪಿ ಪಿ ರಾವ್ ಅವರನ್ನು ಲೋಕಪಾಲ ಆಯ್ಕೆ ಸಮಿತಿಗೆ ಪ್ರಖ್ಯಾತ ನ್ಯಾಯವೇತ್ತರಾಗಿ ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ರಾವ್ ನಿಧನ ಹೊಂದಿದ್ದರು. ಹಾಗಾಗಿ ಆಯ್ಕೆ ಸಮಿತಿಯಲ್ಲಿನ ನ್ಯಾಯವೇತ್ತರ ಹುದ್ದೆ ಖಾಲಿ ಬಿದ್ದಿದೆ.