Advertisement

“ಭದ್ರತಾ ದಾರ’ತಯಾರಿ: ಪಾಕ್‌-ಚೀನದ ನೆರಳೂ ಬೀಳುವಂತಿಲ್ಲ!

07:26 PM Nov 02, 2022 | Team Udayavani |

ನವದೆಹಲಿ: ಕರೆನ್ಸಿ ನೋಟುಗಳ ಮುದ್ರಣಕ್ಕಾಗಿ 3 ಲಕ್ಷ ಕಿಲೋಮೀಟರ್‌ ಉದ್ದದ “ಬಣ್ಣ ಬದಲಿಸುವಂಥ ಭದ್ರತಾ ದಾರ’ವನ್ನು ತಯಾರಿಸಲು ದೇಶವು ಜಾಗತಿಕ ಕಂಪನಿಗಳನ್ನು ಸಂಪರ್ಕಿಸಿದ್ದು, ಅವುಗಳಿಗೆ ಹಲವು ಷರತ್ತುಗಳನ್ನೂ ಸರ್ಕಾರ ವಿಧಿಸಿದೆ.

Advertisement

ಭದ್ರತಾ ದಾರ ತಯಾರಿ ಪ್ರಕ್ರಿಯೆಯು ಸಂಪೂರ್ಣ ಭದ್ರತಾ ವಲಯದೊಳಗೆ ನಡೆಯಬೇಕು. ಪಾಕಿಸ್ತಾನ ಮತ್ತು ಚೀನಗೆ ಸಂಬಂಧಿಸಿದವರು ಇದರ ಹತ್ತಿರವೂ ಸುಳಿಯಬಾರದು. ಈ ಎರಡು ದೇಶಗಳ ನಾಗರಿಕರು ಅಥವಾ ಈ ಹಿಂದೆ ಪಾಕಿಸ್ತಾನ ಅಥವಾ ಚೀನದಲ್ಲಿ ಕೆಲಸ ಮಾಡಿರುವವರು, ಅಲ್ಲಿ ನಿಯೋಜಿತರಾಗಿದ್ದ ಬೇರೆ ದೇಶದ ನಾಗರಿಕರು ಅಥವಾ ಈ ಎರಡೂ ದೇಶಗಳೊಂದಿಗೆ ನಂಟು ಹೊಂದಿರುವಂಥವರನ್ನು ಯಾವುದೇ ಕಾರಣಕ್ಕೂ “ಭದ್ರತಾ ದಾರ’ ಸಿದ್ಧತಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಷರತ್ತುಗಳನ್ನು ಭಾರತ ವಿಧಿಸಿದೆ.

“ಬಣ್ಣ ಬದಲಿಸುವಂಥ ಭದ್ರತಾ ದಾರ’ ಎಂಬುದು ಕರೆನ್ಸಿ ನೋಟುಗಳಲ್ಲಿ ಕಾಣಸಿಗುವ ಪ್ರಮುಖ ಭದ್ರತಾ ಅಂಶವಾಗಿದೆ. ನಕಲಿ ನೋಟುಗಳ ಮುಂದೆ ಅಸಲಿ ನೋಟು ಯಾವುದು ಎಂಬುದನ್ನು ಈ ದಾರದ ಮೂಲಕ ಪತ್ತೆಹಚ್ಚಬಹುದು.

ಭಾರತದ ನಕಲಿ ನೋಟುಗಳನ್ನು ಮುದ್ರಿಸುವ ಜಾಲಗಳ ಮೂಲವೇ ಪಾಕಿಸ್ತಾನ ಮತ್ತು ಚೀನ. ಹೀಗಾಗಿ, ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಭಾರತಕ್ಕೆ ಸರಬರಾಜು ಮಾಡಲಾಗುವ ಉತ್ಪನ್ನಗಳು ವಿಶೇಷವಾಗಿ ಭಾರತಕ್ಕೆಂದೇ ತಯಾರಿಸಿರಬೇಕು, ಅದನ್ನು ಬೇರೆ ದೇಶಗಳಿಗೆ ಪೂರೈಕೆ ಮಾಡುವಂತಿಲ್ಲ. ಉತ್ಪಾದನಾ ಪರಿಕರಗಳು, ಕಚ್ಚಾ ವಸ್ತುಗಳ ಸಾಗಣೆ ಕೂಡ ಸೋರಿಕೆಗೆ ಅವಕಾಶ ನೀಡದಂತೆ ಸೂಕ್ತ ಭದ್ರತೆಯನ್ನು ಒಳಗೊಂಡಿರಬೇಕು.

ಜತೆಗೆ, ಕಂಪನಿಯ ಮಾಲೀಕತ್ವದಲ್ಲಿ ಅಥವಾ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಕೂಡಲೇ ಭಾರತ ಸರ್ಕಾರ, ಹಣಕಾಸು ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯವಾಗಿ ಎಂದೂ ಸೂಚಿಸಲಾಗಿದೆ ಎಂದು ನ್ಯೂಸ್‌18 ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next