ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 26,291 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 3 ತಿಂಗಳಲ್ಲಿಯೇ ದಿನವೊಂದರಲ್ಲಿ ದಾಖಲಾದ ಗರಿಷ್ಠ ಏರಿಕೆಯಾಗಿದ್ದು, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,13,85,339ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ(ಮಾರ್ಚ್ 15) ತಿಳಿಸಿದೆ.
ಇದನ್ನೂ ಓದಿ:ಇನ್ಮುಂದೆ ಪಡಿತರ ಚೀಟಿ ಬೇಕೆಂದಿಲ್ಲ..! ಯಾಕೆ..? ಪೂರ್ಣ ಮಾಹಿತಿ ಇಲ್ಲಿದೆ.
ಮೈಮರೆಯಲು ಇದು ಸಮಯವಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ದೇಶವಾಸಿಗಳಿಗೆ ಹಾಗೂ ಎಲ್ಲಾ ಸರ್ಕಾರಗಳಿಗೆ ರವಾನಿಸಿದೆ. ಭಾನುವಾರ ಹೊತ್ತಿಗಿನ ಅಂಕಿಅಂಶಗಳನ್ನೇ ಪರಿಗಣಿಸಿದರೆ, ಈ ಏರಿಕೆಯಿಂದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು 1.13 ಕೋಟಿಗೆ ಮುಟ್ಟಿಸಿದೆ. ಇಲ್ಲಿಯವರೆಗೆ ಒಟ್ಟು 1,58,607 ಸಾವುಗಳು ಸಂಭವಿಸಿದೆ. ಇದರಲ್ಲಿ ನಿನ್ನೆ ಒಂದೇ ದಿನ ಸಂಭವಿಸಿದ 161 ಸಾವುಗಳೂ ಸೇರಿವೆ. ಕಳೆದ 44 ದಿನಗಳಲ್ಲೇ ಇದು ದಿನವೊಂದರಲ್ಲಿ ಸಂಭವಿಸಿದ ಗರಿಷ್ಠ ಸಾವಿನ ಸಂಖ್ಯೆ ಯಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿವೆ.
ಭಾರತವನ್ನು ಮೀರಿಸಿದ ಬ್ರೆಜಿಲ್: ವಿಶ್ವದಲ್ಲೇ 2ನೇ ಗರಿಷ್ಠ ಕೊರೊನಾ ಬಾಧಿತ ದೇಶ ಎಂಬ ಕುಖ್ಯಾತಿಗೆ ಈಗ ಬ್ರೆಜಿಲ್ ತುತ್ತಾಗಿದೆ. ಈಗ ಅಲ್ಲಿನ ಪ್ರಕರಣಗಳ ಸಂಖ್ಯೆ ಒಟ್ಟು 1.14 ಕೋಟಿಗೇರಿದೆ. ಸಾವಿನ ಸಂಖ್ಯೆ 2,77,216 ಕ್ಕೇರಿದೆ. ಭಾರತದಲ್ಲಿ ಪ್ರಕರಣಗಳ ಸಂಖ್ಯೆ 1.13 ಕೋಟಿ.
56 ವಿದ್ಯಾರ್ಥಿಗಳಿಗೆ ಸೋಂಕು: ತಮಿಳುನಾಡಿನ ತಂಜಾವೂರು ಸಮೀಪದ ಅಮ್ಮಾಟಿ ಪೆಟಾಯಿ ಹಳ್ಳಿಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ 56 ವಿದ್ಯಾರ್ಥಿನಿಯರು ಮತ್ತು ಒಬ್ಬ ಶಿಕ್ಷಕಿಗೆ ಕೋವಿಡ್ ಕಾಣಿಸಿಕೊಂಡಿದೆ.
ಗುಜರಾತ್ ಶಾಲಾ, ಕಾಲೇಜು ಸಂಕಷ್ಟದಲ್ಲಿ:
ಗುಜರಾತ್‌ನ ಸೂರತ್ ನಗರದ ಎರಡು ಪ್ರಾಥಮಿಕ ಶಾಲೆಗಳು, ಒಂದು ಕಾಲೇಜನ್ನು ಎರಡು ವಾರಗಳ ಕಾಲ ಬಂದ್ ಮಾಡಲಾಗಿದೆ. ಫೆಬ್ರವರಿಯಲ್ಲಿ ಸೂರತ್ ಶಿಕ್ಷಣಸಂಸ್ಥೆಗಳನ್ನು ಮತ್ತೆ ತೆರೆಯಲಾಗಿತ್ತು. ಈ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿರುವುದರಿಂದ ಈ ಕ್ರಮಕ್ಕೆ ಅಲ್ಲಿನ ನಗರಪಾಲಿಕೆ ಮುಂದಾಗಿದೆ.
ಕಠಿಣ ಕ್ರಮದತ್ತ ಮಹಾರಾಷ್ಟ್ರ: ಮೊನ್ನೆ ಶನಿವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ 1,828, ಮುಂಬೈನಲ್ಲಿ 1709, ಪುಣೆಯಲ್ಲಿ 1,667 ಪ್ರಕರಣಗಳು ದಾಖಲಾಗಿದ್ದವು. ಇದರ ಪರಿಣಾಮ ಕಳೆದ ಸೋಮವಾರದಿಂದ ಮಹಾರಾಷ್ಟ್ರದ ಆಯ್ದಭಾಗಗಳಲ್ಲಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದೆ.