ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಇಂದು ಸೋಮವಾರ ಸಲ್ಲಿಸಿರುವ ತನ್ನ ವರದಿಯಲ್ಲಿ ದೇಶಾದ್ಯಂತದ ಗೋವುಗಳಿಗೆ ವಿಶಿಷ್ಟ ಗುರುತು ಸಂಖ್ಯೆಯನ್ನು (ಯೂನಿಕ್ ಐಡೆಂಟಿಫಿಕೇಶನ್ ನಂಬರ್) ಕೊಡುವ ಪ್ರಸ್ತಾವವನ್ನು ಮುಂದಿಟ್ಟಿದೆ.
ಭಾರತ – ಬಾಂಗ್ಲಾ ಗಡಿಯಲ್ಲಿ ದನಗಳ ಕಳ್ಳಸಾಗಣೆ ತೀವ್ರವಾಗಿದ್ದು ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹಾಗೂ ದೇಶಾದ್ಯಂತದ ಗೋವುಗಳಿಗೆ ರಕ್ಷಣೆ ನೀಡುವ ಸಲುವಾಗಿ ಅವುಗಳಿಗೆ ವಿಶಿಷ್ಟ ಗುರುತು ಸಂಖ್ಯೆ ನೀಡುವ ಪ್ರಸ್ತಾವವನ್ನು ಕೇಂದ್ರ ಸರಕಾರ ತನ್ನ ವರದಿಯಲ್ಲಿ ಸುಪ್ರೀಂ ಕೋರ್ಟಿಗೆ ತಿಳಿಸಿರುವುದಾಗಿ ಎಎನ್‌ಐ ವರದಿಮಾಡಿದೆ.
ಈ ವರದಿಯನ್ನು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಯವರು ಸಿದ್ಧಪಡಿಸಿದ್ದಾರೆ.
ಪರಿತ್ಯಕ್ತ ಗೋವುಗಳ ರಕ್ಷಣೆ ಹೊಣೆಗಾರಿಕೆಯು ಆಯಾ ರಾಜ್ಯ ಸರಕಾರದ್ದಾಗಿರುತ್ತದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ವರದಿಯಲ್ಲಿ ಹೇಳಿದೆ.
ಪ್ರತೀ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ 500 ಗೋವುಗಳಿಗೆ ಆಸರೆ ಕಲ್ಪಿಸುವ ಸಾಮರ್ಥ್ಯದ ಕೇಂದ್ರವೊಂದು ನಿರ್ಮಾಣವಾಗಬೇಕು; ಇದರಿಂದ ಗೋವುಗಳ ಕಳ್ಳಸಾಗಣೆಯನ್ನು ಕಡಿಮೆ ಮಾಡುವುದು ಸಾಧ್ಯ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕವೂ ಅಂತಹ ಗೋವುಗಳಿಗೆ ವಿಶೇಷ ರಕ್ಷಣೆ ನೀಡುವಂತಾಗಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಪ್ರತೀ ರಾಜ್ಯದಲ್ಲಿ ಗೋ ಧಾಮಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಕೂಡ ಕೇಂದ್ರ ಸರಕಾರ ತನ್ನ ವರದಿಯಲ್ಲಿ ಮುಂದಿಟ್ಟಿದೆ. ಅಳಿವಿನ ಅಪಾಯದ ಅಂಚಿನಲ್ಲಿರುವ ಮೃಗ ಪಕ್ಷಿಗಳಿಗೆ ರಕ್ಷಣೆ ನೀಡುವ ಧಾಮಗಳ ಮಾದರಿಯಲ್ಲಿ ಗೋಧಾಮಗಳನ್ನು ಸ್ಥಾಪಿಸಿದಲ್ಲಿ ಗೋ ಹತ್ಯೆಗಳನ್ನು ತಡೆಯಲು ಸಾಧ್ಯವಾಗುವುದೆಂದು ವರದಿಯು ಹೇಳಿದೆ.