Advertisement

ಏರ್‌ಇಂಡಿಯಾಕ್ಕೆ 7,000 ಕೋಟಿ ರೂ. ಪ್ಯಾಕೇಜ್‌

06:00 AM Aug 28, 2018 | Team Udayavani |

ನವದೆಹಲಿ: ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾಕ್ಕೆ ಪರಿಹಾರ ಪ್ಯಾಕೇಜ್‌ ಘೋಷಿಸಲು ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ವಾರಂತ್ಯಕ್ಕೆ ಈ ಪ್ಯಾಕೇಜ್‌ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಪ್ಯಾಕೇಜ್‌ ಎರಡು ಭಾಗಗಳನ್ನು ಹೊಂದಿದ್ದು, ಮೊದಲನೆಯದು 7,000 ಕೋಟಿ ರೂ. ಬಂಡವಾಳ ನೀಡಿಕೆ ಮತ್ತು ಎರಡನೆಯದು, ಸಾಲವನ್ನು ವಿಶೇಷ ಉದ್ದೇಶದ ಸಂಸ್ಥೆಗೆ ವರ್ಗಾಯಿಸುವುದಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖೀಸಿ ಸಿಎನ್‌ಬಿಸಿ ಆವಾಝ್ ವರದಿ ಮಾಡಿದೆ.

Advertisement

ಏರ್‌ ಇಂಡಿಯಾದ ಪರವಾಗಿ 2,000 ಕೋಟಿ ರೂ.ಗೆ ಸಚಿವಾಲಯವೇ ಬ್ಯಾಂಕ್‌ ಗ್ಯಾರಂಟಿಯನ್ನೂ ನೀಡಲಿದೆ. ಈ ಸಾಲವನ್ನು ವಿಮಾನಯಾನ ಸಂಸ್ಥೆ ನಿರ್ವಹಣಾ ಬಂಡವಾಳವಾಗಿ ಬಳಸಲಿದೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗಷ್ಟೇ ನಾಗರಿಕ ವಿಮಾನಯಾನ ಸಚಿವಾಲಯವು ಏರ್‌ ಇಂಡಿಯಾಕ್ಕೆ 11,000 ಕೋಟಿ ರೂ. ಪರಿಹಾರ ಪ್ಯಾಕೇಜ್‌ ನೀಡುವಂತೆ ವಿತ್ತ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ ಆ ಬೇಡಿಕೆಯಲ್ಲಿ ಪ್ಯಾಕೇಜ್‌ನ ಬಹುಪಾಲು ಸಾಲ ಪೂರೈಸಲು ಹೋಗುತ್ತಿತ್ತು ಹಾಗೂ ವಿಮಾನಯಾನ ಸಂಸ್ಥೆಯ ಮೂಲ ಕಾರ್ಯಾಚರಣೆಯ ಸುಧಾರಣೆಗೆ ಅಲ್ಪ ಬಳಕೆಯ ಪ್ರಸ್ತಾಪವಿದ್ದ ಕಾರಣ ಅದನ್ನು ತಿರಸ್ಕರಿಸಲಾಗಿತ್ತು. 

ಹೊರೆ ತಗ್ಗಿಸುವ ಉದ್ದೇಶ: ಮೂಲಗಳ ಪ್ರಕಾರ, ಈ ಹೊಸ ಪ್ಯಾಕೇಜ್‌ನ ಮೊದಲ ಭಾಗವು ಏರ್‌ ಇಂಡಿಯಾದ ಹೆಚ್ಚಿನ ಆದಾಯ ತಂದುಕೊಡದ ಆಸ್ತಿ, ಅಂಗಸಂಸ್ಥೆಗಳು ಹಾಗೂ ಸಾಲವನ್ನು ವಿಶೇಷ ಉದ್ದೇಶದ ಸಂಸ್ಥೆಗೆ (ಎಸ್‌ಪಿವಿ) ವರ್ಗಾಯಿಸುವ ಯೋಜನೆ ಹೊಂದಿದೆ. ಕಂಪನಿಯನ್ನು ಹಣಗಳಿಸುವ ಆಸ್ತಿಯನ್ನಾಗಿಸಿ ಸಾಲದ ಹೊರೆಯನ್ನು ತಗ್ಗಿಸುವ ಉದ್ದೇಶ ಇದರ ಹಿಂದಿದೆ.

ಏರ್‌ ಇಂಡಿಯಾದ ಎಲ್ಲಾ ಭೂಮಿ, ಕಟ್ಟಡಗಳು ಹಾಗೂ ಅಂಗಸಂಸ್ಥೆಗಳನ್ನು ಎಸ್‌ಪಿವಿಗೆ ವರ್ಗಾಯಿಸಲಾಗುತ್ತದೆ. ಹಣ ಸಂಚಯನಕ್ಕೆ ಒಂದು ವರ್ಷದ ಸಮಯ ನಿಗದಿಪಡಿಸಲಾಗುತ್ತದೆ. 35,484 ಕೋಟಿ ರೂ. ಅನ್ನು ಎಸ್‌ಪಿವಿಗೆ ವರ್ಗಾಯಿಸಿಕೊಂಡು, 19,826 ಕೋಟಿ ರೂ. ಅನ್ನು ಏರ್‌ಇಂಡಿಯಾದೊಂದಿಗೆ ಉಳಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next