ನವದೆಹಲಿ: ಖಾದ್ಯ ತೈಲಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಈಗ ವ್ಯಾಪಾರಿಗಳಿಗೆ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನಿಗೆ ಮಿತಿ ಹೇರಿದೆ.
ಅಲ್ಲದೆ, ಮುಂದಿನ ಮಾರ್ಚ್ 31ರವರೆಗೆ ಆಮದು ಹಾಗೂ ರಫ್ತು ಮೇಲೂ ನಿರ್ಬಂಧ ಹೇರಿದೆ. ಈ ಮೂಲಕ ಅಡುಗೆಎಣ್ಣೆಯ ದರ ಇಳಿಸಿ, ಗ್ರಾಹಕರ ಹೊರೆ ತಗ್ಗಿಸುವುದು ಸರ್ಕಾರದ ಉದ್ದೇಶವಾಗಿದೆ.
ಕಳೆದ ಒಂದು ವರ್ಷದಲ್ಲಿ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ದರ ಶೇ.46.15ರಷ್ಟು ಹೆಚ್ಚಳವಾಗಿದೆ.
ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೊಸ ಆದೇಶ ಹೊರಡಿಸಿದ್ದು, ಆಯಾ ರಾಜ್ಯಗಳಲ್ಲಿ ಲಭ್ಯವಿರುವ ದಾಸ್ತಾನು ಮತ್ತು ಬಳಕೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿನ ಸರ್ಕಾರಗಳು ಖಾದ್ಯ ತೈಲ ಮತ್ತು ಎಣ್ಣೆಬೀಜಗಳ ದಾಸ್ತಾನಿಗೆ ಎಷ್ಟು ಮಿತಿ ಹೇರಬೇಕು ಎಂಬುದನ್ನು ತೀರ್ಮಾನಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಕೆಲವು ಆಮದುದಾರರು ಮತ್ತು ರಫ್ತುದಾರರಿಗೆ ಮಾತ್ರ ಈ ಮಿತಿಯಿಂದ ವಿನಾಯ್ತಿ ನೀಡಲಾಗಿದೆ.
ಸನ್‌ಫ್ಲವರ್ ಎಣ್ಣೆ ದರ ಕಳೆದ ವರ್ಷ ಕೆಜಿಗೆ 122.82 ರೂ. ಇದ್ದಿದ್ದು ಈ ವರ್ಷ 170.09 ರೂ. ಆಗಿದೆ. ತಾಳೆ ಎಣ್ಣೆ 95 ರೂ.ಗಳಿಂದ ಈಗ 132 ರೂ.ಗೆ ಏರಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಬಡವರನ್ನ ಮರೆಯೊಲ್ಲ : ಸಿಎಂ ಬೊಮ್ಮಾಯಿ