ಹೊಸದಿಲ್ಲಿ : ಪ್ಯಾನ್ ಮತ್ತು ಬ್ಯಾಂಕ್ ಖಾತೆಗೆ ಕಡ್ಡಾಯ ಆಧಾರ್ ನಂಬರ್ ಜೋಡಣೆಯ ಗಡುವನ್ನು ಕೇಂದ್ರ ಸರಕಾರ ಇಂದು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಕೇಂದ್ರ ಹಣಕಾಸು ಸಚಿವಾಲಯಕ್ಕೆ ಒಳಪಟ್ಟ ಕಂದಾಯ ಇಲಾಖೆಯು ನಿನ್ನೆ ಮಂಗಳವಾರವೇ ಈ ಸಂಬಂಧ ಅಧಿಸೂಚನೆಯೊಂದನ್ನು ಹೊರಡಿಸಿದೆ.
ಈ ಅಧಿಸೂಚನೆಯಲ್ಲಿ “ಆಧಾರ್ ನಂಬರ್ ಮತ್ತು ಪ್ಯಾನ್ ನಂಬರನ್ನು 2017ರ ಡಿಸೆಂಬರ್ 31ರ ಒಳಗೆ ಸಲ್ಲಿಸಿ’ ಎಂಬ ಪದಗಳನ್ನು ತೆಗೆದು “ಆಧಾರ್ ನಂಬರ್, ಪ್ಯಾನ್ ಅಥವಾ ಫಾರ್ಮ್ ನಂಬರ್ 60ನ್ನು ಕೇಂದ್ರ ಸರಕಾರವು ಸೂಚಿಸಲಿರುವ ದಿನಾಂಕದ ಒಳಗೆ ಸಲ್ಲಿಸಿ’ ಎಂಬ ಪದಗಳನ್ನು ಬಳಸಲಾಗಿದೆ.
ಸರಕಾರ ಈ ಮೊದಲು ಬ್ಯಾಂಕ್ ಖಾತೆ, ಪ್ಯಾನ್ ನಂಬರನ್ನು ಆಧಾರ್ ಜತೆಗೆ ಜೋಡಿಸುವ ಅಂತಿಮ ದಿನಾಂಕವನ್ನು 2017ರ ಡಿ.31ಕ್ಕೆ ನಿಗದಿಸಿತ್ತು.
Related Articles
ಎಲ್ಲರಿಗೂ ತಿಳಿದಿರುವ ಹಾಗೆ 12 ಅಂಕೆಗಳ ಆಧಾರ್ ನಂಬರನ್ನು ಭಾರತದ ವಿಶಿಷ್ಟ ಗುರುತು ಪತ್ರ ಪ್ರಾಧಿಕಾರ ನೀಡುತ್ತದೆ; ಪ್ಯಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ; ಫಾರ್ಮ್ ನಂಬರ್ 60 ಎಂದರೆ ಇನ್ನೂ ಆಧಾರ್ ಹೊಂದದವರು ಆ ಬಗ್ಗೆ ಘೋಷಣೆ ಮಾಡಿಕೊಳ್ಳಬೇಕಾದ ಅರ್ಜಿ ನಮೂನೆಯಾಗಿದೆ.
ಕಳೆದ ವಾರವಷ್ಟೇ ಕೇಂದ್ರ ಸರಕಾರ ತನ್ನ ವಿವಿಧ ಸೇವೆಗಳು ಮತ್ತು ಜನ ಕಲ್ಯಾಣ ಯೋಜನೆಗಳಿಗೆ ಆಧಾರ್ ಜೋಡಿಸುವ ಅಂತಿಮ ದಿನಾಂಕವನ್ನು ತಾನು 2018ರ ಮಾರ್ಚ್ 31ರ ವರೆಗೂ ವಿಸ್ತರಿಸಲು ಬಯಸಿದ್ದೇನೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.