Advertisement

ಮುಂದುವರಿದ ಕೇಂದ್ರ ತಂಡದ ಪರಿಶೀಲನೆ​​​​​​​

06:00 AM Nov 19, 2018 | Team Udayavani |

ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ಬರ ಪರಿಹಾರ ಅಧ್ಯಯನ ತಂಡದ ಅಧಿಕಾರಿಗಳು ಭಾನುವಾರವೂ
ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ನಡೆಸಿದರು.

Advertisement

ಪ್ರವಾಸದ ಎರಡನೇ ದಿನವಾದ ಭಾನುವಾರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್‌ ಗೌತಮ್‌ ನೇತೃತ್ವದ ತಂಡ ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿತು. ಈ ಮಧ್ಯೆ,ನಿಗದಿಯಾದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಅಲಬೂರು ಗ್ರಾಮಕ್ಕೆ ತಂಡ ಬಾರದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಡಾ.ಮಹೇಶ್‌ ನೇತೃತ್ವದ ಎರಡನೇ ತಂಡ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿತು. ವಿಜಯಪುರದಲ್ಲಿ ಮಾತನಾಡಿದ ಡಾ.ಮಹೇಶ, ಈಗಷ್ಟೇ ಬರ ಅಧ್ಯಯನ ಆರಂಭಿಸಿದ್ದು, ವಾರದಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.

ಈ ನಡುವೆ, ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್‌ ಚೌಧರಿ ನೇತೃತ್ವದ ತಂಡ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತೆರಳಿ, ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿತು.

ಸಂಪುಟ ಉಪ ಸಮಿತಿ ಜತೆ ಇಂದು ಚರ್ಚೆ: ಕೇಂದ್ರ ತಂಡ ಸೋಮವಾರ ಸಚಿವ ಸಂಪುಟ ಉಪ ಸಮಿತಿ ಜತೆ ಚರ್ಚಿಸಲಿದೆ. ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸೇರಿದಂತೆ ಸಂಪುಟ ಉಪ ಸಮಿತಿ ಸದಸ್ಯರ ಜತೆ ಸಮಾಲೋಚನೆ ನಡೆಸಿದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ಈಗಾಗಲೇ ರಾಜ್ಯ ಸರ್ಕಾರ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 2,434 ಕೋಟಿ ರೂ.ಗಳನ್ನು ಪರಿಹಾರವಾಗಿ ಒದಗಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಬರದಿಂದ ರಾಜ್ಯದಲ್ಲಿ ಒಟ್ಟು 16,662 ಕೋಟಿ ರೂ.ನಷ್ಟವಾಗಿರುವ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದೆ.

Advertisement

ಬರ ಅಧ್ಯಯನ ತಂಡಕ್ಕೆ ಬಾಡೂಟ
ದಾವಣಗೆರೆ:
ಬರ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ತಂಡ ದಾವಣಗೆರೆ ಜಿಲ್ಲಾ ಪ್ರವಾಸದಲ್ಲಿ ಬಾಡೂಟ ಸೇವಿಸಿದೆ. ಭಾನುವಾರ, ಬಳ್ಳಾರಿ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಮಧ್ಯಾಹ್ನ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ, ಜಗಳೂರು ಹಾಗೂ ದಾವಣಗೆರೆ ತಾಲೂಕಿನ ಕೆಲವು ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಿಸಲು ಆಗಮಿಸಿದ್ದ ತಂಡಕ್ಕೆ ಹರಪನಹಳ್ಳಿ ತಾಲೂಕು ಚಿಗಟೇರಿ ಬಳಿಯ ನಜೀರ್‌ ನಗರದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ಬರ ಅಧ್ಯಯನ ತಂಡಕ್ಕೆ ಹೊರಗಡೆಯಿಂದ ಬಾಡೂಟ ತರಿಸಲಾಗಿತ್ತು. ಚಿಕನ್‌ ಮಸಾಲಾ, ಎಗ್‌ ಮಸಾಲಾ, ಮಟನ್‌ ಚಾಪ್ಸ್‌, ಖಡಕ್‌ ರೊಟ್ಟಿ, ರಾಗಿ ಮುದ್ದೆ, ಹೆಸರು ಬೇಳೆ ಪಾಯಸ, ಅನ್ನ, ಸಾಂಬಾರ್‌ ಹೊರಗಡೆಯಿಂದ ತರಿಸಲಾಗಿತ್ತು. ಅಧಿಕಾರಿಗಳು ಬಾಡೂಟ ಸವಿದು, ನಂತರ ಜಗಳೂರು ಹಾಗೂ ದಾವಣಗೆರೆ ತಾಲೂಕಿನ ಗ್ರಾಮದ ಜಮೀನಿನಲ್ಲಿ ಬೆಳೆ ಹಾನಿ ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next