Advertisement

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

05:56 PM May 14, 2024 | Team Udayavani |

ಉದಯವಾಣಿ ಸಮಾಚಾರ
ಮುಂಡರಗಿ: ಕೇಂದ್ರದ ಬರ ಪರಿಹಾರದ ಹಣ ಶೇ.60ರಷ್ಟು ಮಾತ್ರ ರೈತರ ಖಾತೆಗೆ ಬಂದಿದೆ. ಜೊತೆಗೆ ರಾಜ್ಯ ಸರ್ಕಾರ ಕೂಡ ರೈತರಿಗೆ ಬರ ಮತ್ತು ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರಕಾರ ಬರ ಪರಿಹಾರ ಹೆಕ್ಟೇರ್‌ಗೆ ನೀರಾವರಿ ಜಮೀನಿಗೆ 17 ಸಾವಿರ, ಖುಷ್ಕಿ ಜಮೀನಿಗೆ 13 ಸಾವಿರ, ತೋಟಗಾರಿಕೆ ಬೆಳೆಗಳಿಗೆ 25 ಸಾವಿರ ರೂ. ನಿಗದಿಪಡಿಸಲಾಗಿತ್ತು. ಆದರೆ ಹೆಕ್ಟೇರ್‌ಗೆ 4ರಿಂದ 5 ಸಾವಿರ ರೂ.ಗಳು ಮಾತ್ರ ರೈತರ ಖಾತೆಗೆ ಜಮೆ ಆಗಿವೆ. ರಾಜ್ಯ ಸರಕಾರ ನೀಡಿದ 2 ಸಾವಿರ ರೂ. ಗಳು ಶೇ. 75ರಷ್ಟು ರೈತರಿಗೆ ಬಂದಿಲ್ಲ. ಎಲ್ಲಾ ರೈತರಿಗೂ ಬರ ಪರಿಹಾರ ಹಣ ಬರಬೇಕು. ಅಲ್ಲದೇ ರಾಜ್ಯವು ಕೇಂದ್ರ ಸರಕಾರ ನೀಡಿರುವ
ಬರ ಪರಿಹಾರದಲ್ಲಿ ಶೇ. 50 ರಷ್ಟಾದರೂ ನೀಡಬೇಕು ಎಂದರು.

ಅಲ್ಲದೇ ಶಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಸೂಕ್ಷ್ಮ ನೀರಾವರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಸೂಕ್ಷ್ಮ ನೀರಾವರಿ ಕಾಮಗಾರಿಗೆ ಅಳವಡಿಸುತ್ತಿರುವ ಪೈಪ್‌ ಕಳಪೆಯಾಗಿವೆ. ಈ ಕೊಡಲೇ ಸೂಕ್ಷ್ಮ ನೀರಾವರಿ ಪೈಪ್‌ಲೈನ್‌ ಕಾಮಗಾರಿ ನಿಲ್ಲಿಸಬೇಕು. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಜೊತೆಗೆ ನೀರಿನ ಹಾಹಾಕಾರ ಪ್ರತಿ ಗ್ರಾಮದಲ್ಲಿದೆ. ಪ್ರತಿಯೊಂದು ಗ್ರಾಮದ ನೂರು ಎಕರೆ
ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಕೆರೆ ನಿರ್ಮಿಸಿದರೆ, ಹಸಿರು ಉಕ್ಕಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.

ಶಂಕರಗೌಡ ಜಾಯನಗೌಡರ ಮಾತನಾಡಿದರು. ಈ ವೇಳೆ ರೈತ ಮುಖಂಡರಾದ ರಾಮಚಂದ್ರ ಇಲ್ಲೂರು, ಶಿವನಗೌಡ ಗೌಡರ, ಸಂದೇಶ ಹಡಪದ, ಅಶೋಕ ಬನ್ನಿಕೊಪ್ಪ, ಚಂದ್ರಪ್ಪ ಬಳ್ಳಾರಿ, ದ್ಯಾಮಣ್ಣ ವಾಲೀಕಾರ, ರಾಘವೇಂದ್ರ ಕುರಿ, ಹುಚ್ಚಪ್ಪ ಹಂದ್ರಾಳ, ಪುತ್ರಪ್ಪ ಅಳವಂಡಿ, ಮೃತ್ಯುಂಜಯ ಸಜ್ಜನ, ಹುಸೇನಸಾಬ್‌ ಕುರಿ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next