Advertisement

ತೈಲ ಅಲ್ಪ ಅಗ್ಗ: ಪೆಟ್ರೋಲ್‌, ಡೀಸೆಲ್‌ ಬೆಲೆ 2.5 ರೂ. ಇಳಿಸಿದ ಕೇಂದ್ರ

05:25 AM Oct 05, 2018 | Karthik A |

ಹೊಸದಿಲ್ಲಿ: ಕಳೆದ ಹಲವು ದಿನಗಳಿಂದಲೂ ನಿರಂತರವಾಗಿ ಏರುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯ ಬಿಸಿ ಕೊಂಚ ಕಡಿಮೆಯಾಗಿದೆ. ಬೆಲೆ ಏರಿಕೆಯ ಬಗ್ಗೆ ಜನರ ಆಕ್ರೋಶಕ್ಕೆ ಕೇಂದ್ರ ಸರಕಾರ ಕಿವಿಯಾಗಿದ್ದು, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ ಮೇಲೆ 2.50 ರೂ. ಇಳಿಕೆ ಮಾಡಿದೆ. ಈ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಸರಕಾರವು ಅಬಕಾರಿ ಸುಂಕವನ್ನು ಲೀಟರ್‌ ಮೇಲೆ 1.50 ರೂ. ಇಳಿಸಿದ್ದು, ತೈಲ ಕಂಪೆನಿಗಳಿಗೆ ಪಾವತಿಯಾಗುವ ಮೊತ್ತದಲ್ಲಿ 1  ರೂ. ಇಳಿಕೆ ಮಾಡಿ ಘೋಷಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಸರಕಾರಕ್ಕೆ 10,500 ಕೋಟಿ ರೂ. ಹೊರೆಯಾಗಲಿದೆ. ಬೆಲೆ ಇಳಿಕೆ ನಿರ್ಧಾರವು ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ.

Advertisement

2014ರ ನವೆಂಬರ್‌ನಿಂದ 2016 ಜನವರಿಯವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಯಾಗಿದ್ದರಿಂದ ಹಂತ ಹಂತವಾಗಿ ಸರಕಾರ ಪೆಟ್ರೋಲ್‌ ಮೇಲೆ ಲೀ.ಗೆ 11.77 ರೂ. ಹಾಗೂ ಡೀಸೆಲ್‌ ಮೇಲೆ ಲೀ.ಗೆ 13.47 ರೂ. ಅಬಕಾರಿ ಸುಂಕ ಏರಿಕೆ ಮಾಡಿತ್ತು. ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿದ್ದಂತೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾತ್ರ 2 ರೂ. ಇಳಿಕೆ ಮಾಡಲಾಗಿತ್ತು. ಕಳೆದ ಮೇ ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಿದ್ದರೂ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಬೇಕು ಎಂಬ ಜನರ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸುತ್ತಲೇ ಬಂದಿತ್ತು. ತೈಲ ಸಚಿವ ಧರ್ಮೇಂದ್ರ ಪ್ರಧಾನ್‌ ಹಾಗೂ ವಿವಿಧ ಸಚಿವಾಲಯಗಳ ಸಮಿತಿ ಸಭೆಯ ಅನಂತರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

11 ರಾಜ್ಯಗಳಲ್ಲಿ ಇಳಿಕೆ
ಕೇಂದ್ರ ಸರಕಾರದ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಛತ್ತೀಸ್‌ಗಢ, ಗುಜರಾತ್‌, ಉತ್ತರಪ್ರದೇಶ, ಝಾರ್ಖಂಡ್‌, ತ್ರಿಪುರ, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂ ಸಹಿತ 11 ರಾಜ್ಯಗಳು ಲೀ.ಗೆ 2.50 ರೂ. ಇಳಿಕೆ ಮಾಡಿವೆ. ಇದರಿಂದಾಗಿ ಈ ರಾಜ್ಯಗಳಲ್ಲಿ 5 ರೂ. ಇಳಿಕೆಯಾದಂತಾಗುತ್ತದೆ. ಸೇಲ್ಸ್‌ ಟ್ಯಾಕ್ಸ್‌ ಅಥವಾ ವ್ಯಾಟ್‌ನಲ್ಲಿ 2.50 ರೂ. ಇಳಿಕೆ ಮಾಡುವಂತೆ ಎಲ್ಲ ರಾಜ್ಯಗಳಿಗೂ ಪತ್ರ ಬರೆಯುತ್ತೇವೆ ಎಂದು ಜೇಟ್ಲಿ ಹೇಳಿದ್ದಾರೆ. ಕಚ್ಚಾ ತೈಲ ಬೆಲೆ ಏರಿರುವುದರಿಂದ ರಾಜ್ಯಗಳ ಆದಾಯದಲ್ಲೂ ಏರಿಕೆಯಾಗಿದೆ. ಹೀಗಾಗಿ 2.50 ರೂ. ಇಳಿಕೆ ಮಾಡುವುದರಿಂದ ಸರಕಾರಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇನ್ನೊಂದೆಡೆ ಜೇಟ್ಲಿ ಪತ್ರ ಕೈಗೆ ಸಿಕ್ಕಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. ಕರ್ನಾಟಕ, ರಾಜಸ್ಥಾನ ಹಾಗೂ ಆಂಧ್ರಪ್ರದೇಶದಲ್ಲಿ ಈಗಾಗಲೇ ಬೆಲೆ ಇಳಿಕೆ ಮಾಡಲಾಗಿದೆ.

ತೈಲ ಆಮದು ಹೆಚ್ಚಿದ್ದರಿಂದಾಗಿ ಭಾರತ ಆರ್ಥಿಕ ಕುಸಿತ ಎದುರಿಸುತ್ತಿದೆ. ತೈಲ ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸಬೇಕಿದೆ. ರಫ್ತು ಮಾಡಬಹುದಾದ ಉತ್ಪನ್ನಗಳನ್ನು ದೇಶ ಕಂಡುಕೊಳ್ಳಬೇಕಿದೆ. ಎಥೆನಾಲ್‌, ಮೆಥೆನಾಲ್‌, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ ಸಾರಿಗೆಯನ್ನು ಪರ್ಯಾಯವಾಗಿ ಬಳಸುವ ಅವಕಾಶವನ್ನು ನಾವು ಹೊಂದಿದ್ದೇವೆ.
– ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಕೇಂದ್ರ ಸರಕಾರ ತೈಲ ಬೆಲೆಯಲ್ಲಿ ಕನಿಷ್ಠ ಪಕ್ಷ ಲೀಟರ್‌ಗೆ 10 ರೂ.ಗಳನ್ನಾದರೂ ಇಳಿಕೆ ಮಾಡಬೇಕು. ಜತೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ಅನ್ನು  ವಾಪಸ್‌ ಪಡೆಯಬೇಕು.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

Advertisement

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ನಿರ್ಧಾರವು ಜನಸಾಮಾನ್ಯರ ಕ್ಷೇಮಾಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕಿರುವ ಸಂವೇದನೆಯನ್ನು ತೋರಿಸುತ್ತಿದೆ.
– ಅಮಿತ್‌ ಶಾ,  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ರಾಜ್ಯ ಸರಕಾರ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ಮಾಡಿದರೆ ಹೆಚ್ಚುವರಿ ತೆರಿಗೆ ಪ್ರಮಾಣದಲ್ಲಿ ಕಡಿತವಾಗಲಿದೆಯೇ ಹೊರತು ಯಾವುದೇ ಹೊರೆ ಬೀಳುವುದಿಲ್ಲ. ರಾಜ್ಯ ಸರಕಾರ ಇತ್ತೀಚೆಗೆ ತೈಲ ಬೆಲೆ ಇಳಿಕೆ ಮಾಡಿದ್ದು 46 ಪೈಸೆಯೇ ಹೊರತು 2 ರೂ. ಮಾಡಿಲ್ಲ.
– ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ  ನಾಯಕ

ರಾಜ್ಯ ಸರಕಾರ ತೈಲ ಬೆಲೆ ಇಳಿಕೆ ಮಾಡಿ ಸರಿಸುಮಾರು ತಿಂಗಳು ಕಳೆದಿದೆ. ಈಗಲಾದರೂ ಕೇಂದ್ರ ಜನ ಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಪೆಟ್ರೋಲ್‌, ಡೀಸೆಲ್‌ ದರ ದಲ್ಲಿ ತಲಾ 2.50 ರೂ. ಇಳಿಕೆ ಮಾಡಿದೆ. ಇನ್ನು ಸರಕಾರಿ ಸಾರಿಗೆ ಬಸ್‌ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.
– ಎಚ್‌.ಡಿ. ಕುಮಾರಸ್ವಾಮಿ

ಕೇಂದ್ರವು ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ತಲಾ 2.50 ರೂ. ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ತಲಾ 2.50 ರೂ. ಇಳಿಕೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಆದರೆ ಈಗಾಗಲೇ ತುಸು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಈಗ ಕಡಿಮೆ ಮಾಡುವ ಪ್ರಮೇಯವೇ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next