ನವದೆಹಲಿ: ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ನೋವು ನಿವಾರಕ ಮಾತ್ರೆಗಳಾದ ಸಾರಿಡಾನ್ ಸೇರಿದಂತೆ ಸುಮಾರು 328 ಮಾತ್ರೆ, ಔಷಧಿಯ ಮಾರಾಟ ಹಾಗೂ ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿಸಿದೆ.
ಅಷ್ಟೇ ಅಲ್ಲ 6 ವಿಧದ ಫಿಕ್ಸಡ್ ಡೋಸ್ ಕಾಂಬೀನೇಷನ್(ಎಫ್ ಡಿಸಿ-ಒಂದೇ ಮಾತ್ರೆಯಲ್ಲಿ ಎರಡು ವಿಧದ ನೋವು ನಿವಾರಕ ಇರುವ) ಮಾತ್ರೆಗಳ ಉತ್ಪಾದನೆ, ಮಾರಾಟ ಅಥವಾ ವಿತರಣೆಗೆ ನಿರ್ಬಂಧ ವಿಧಿಸಿರುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರಿಡಾನ್ ಸೇರಿದಂತೆ ಚರ್ಮದ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ ಗ್ಲೂಕೋನಾರ್ಮ್ ಪಿಜಿ, ಆ್ಯಂಟಿ ಬಯಾಟಿಕ್ ಲೂಪಿಡಾಕ್ಸ್, ಆ್ಯಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ, ಔಷಧಿಗಳನ್ನು ನಿಷೇಧಿಸಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆ 2017ರ ಸೆಕ್ಷನ್ 26ಎ ಪ್ರಕಾರ ಈ ಹಿಂದೆ 344 ಎಫ್ ಡಿಸಿ ಮಾತ್ರೆ, ಔಷಧಿಗಳನ್ನು ನಿಷೇಧಿಸಿತ್ತು. ಬಳಿಕ ಮತ್ತೆ ಐದು ಹೆಚ್ಚುವರಿ ಎಫ್ ಡಿಸಿ ಮಾತ್ರೆಗಳನ್ನು ಪಟ್ಟಿಗೆ ಸೇರಿಸಿತ್ತು ಎಂದು ವರದಿ ತಿಳಿಸಿದೆ.
ಈ ನಿಷೇಧದ ಕ್ರಮ ಪ್ರಶ್ನಿಸಿ ಹಲವಾರು ಔಷಧ ತಯಾರಿಕೆ ಕಂಪನಿಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರ ನಡೆಸುತ್ತಿದ್ದವು.