ನವದೆಹಲಿ: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ರಕ್ಷಣಾ ಸಿಬಂದಿಯ ಮುಂದಿನ ಮುಖ್ಯಸ್ಥರನ್ನಾಗಿ (ಸಿಡಿಎಸ್) ಭಾರತ ಸರಕಾರ ಬುಧವಾರ ನೇಮಿಸಿದೆ. ಅವರು ಸೇನಾ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ಸುಮಾರು 40 ವರ್ಷಗಳ ಕಾಲ ತನ್ನ ವೃತ್ತಿಜೀವನದಲ್ಲಿ, ಚೌಹಾಣ್ ಹಲವಾರು ಕಮಾಂಡ್, ಸಿಬಂದಿ ನೇಮಕಾತಿ ಅನುಭವಗಳನ್ನು ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ದಂಗೆ-ನಿರೋಧಕ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲಾಗಿತ್ತು. ಅವರು ಪದಾತಿ ದಳದ ವಿಭಾಗಕ್ಕೆ ಕಮಾಂಡರ್ ಆಗಿದ್ದರು. ಎನ್‌ಡಿಎ ಹಳೆ ವಿದ್ಯಾರ್ಥಿಯಾಗಿದ್ದ ಅವರು ಸೆಪ್ಟೆಂಬರ್ 2019 ರಲ್ಲಿ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆದರು ಮತ್ತು ಮೇ 31, 2021 ರಂದು ಸೇವೆಯಿಂದ ನಿವೃತ್ತರಾಗುವವರೆಗೆ ಅಧಿಕಾರವನ್ನು ಹೊಂದಿದ್ದರು.
ಚೌಹಾಣ್ ಅವರು PVSM, UYSM, AVSM, SM, VSM, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದರು.