ವಿಧಾನಸಭೆ: ನೀತಿ ಆಯೋಗದ ಸಭೆಗೆ ಹಾಜರಾಗದೆ ಬಹಿಷ್ಕಾರ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡೆಗೆ ಪ್ರತಿಪಕ್ಷ ಬಿಜೆಪಿ ಖಂಡನೆ ವ್ಯಕ್ತಪಡಿಸಿದ್ದು, ಸಿಎಂ ನಡೆಯಿಂದ ರಾಜ್ಯಕ್ಕೆ ಅನ್ಯಾಯ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಜರಾಗದೇ ಇರುವುದನ್ನು ಸಮರ್ಥಿಸಿಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರಕ್ಕೆ ನೀತಿಯೇ ಇಲ್ಲವೆಂದಾದ ಮೇಲೆ ನೀತಿ ಆಯೋಗದ ಸಭೆಗೆ ಹಾಜರಾಗುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಹೋಗದೆ ಬಹಿಷ್ಕರಿಸಿರುವುರಿಂದ ಕರ್ನಾಟಕಕ್ಕೆ ಅನ್ಯಾಯ ಆಗಲಿದೆ. ಅವರು ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ರಾಜ್ಯದ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆ ಬಹಿಷ್ಕರಿಸುವ ಸಿಎಂ ನಡೆ ಅತ್ಯಂತ ಕೀಳುಮಟ್ಟದ ರಾಜಕೀಯ. ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ನೀಡಿರುವ ಕನ್ನಡಿಗರಿಗೆ ಮಾಡಿದ ಅಪಮಾನ. “ಬಾಲಕ ಬುದ್ಧಿ’ಯ ರಾಹುಲ್‌ಗಾಂಧಿ ತಾಳಕ್ಕೆ ತಕ್ಕಂತೆ ಕುಣಿಯದೆ, ಸ್ವಲ್ಪ ಧೈರ್ಯ, ಮುತ್ಸದ್ದಿತನ ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ, ಕೇವಲು ಕುರ್ಚಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿ ಕೊಟ್ಟಿದ್ದೀರಿ ಎಂದು ಜರಿದಿದ್ದಾರೆ.
ಸಿಎಂ ಹಾಜರಾಗದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಶಿವಕುಮಾರ್, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇಲ್ಲಿ ನೀತಿಯೂ ಇಲ್ಲ. ಈ ಕಾರಣದಿಂದ ನೀತಿ ಆಯೋಗದ ಸಭೆ ಬಹಿಷ್ಕರಿಸಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ನೀತಿಯೇ ಇಲ್ಲ. ಹೀಗಿರುವಾಗ ನೀತಿ ಆಯೋಗದ ಸಭೆಯಿಂದ ರಾಜ್ಯಕ್ಕೇನು ಪ್ರಯೋಜನ ಎಂದು ಪ್ರಶ್ನಿಸಿದರು.